ತಿರುಪತಿ (ಆಂಧ್ರ ಪ್ರದೇಶ): ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಆಡಳಿತ ಮಂಡಳಿ ಖುಷಿ ಸುದ್ದಿ ನೀಡಿದೆ. ಇದುವರೆಗೆ ತಿರುಮಲಕ್ಕೆ ಭೇಟಿ ನೀಡುವ ಭಕ್ತರಿಗೆ ಮಿತಿಗೆ ಅನುಗುಣವಾಗಿ ಲಡ್ಡು ಪ್ರಸಾದವನ್ನು ನೀಡಲಾಗುತ್ತಿತ್ತು. ಆದರೆ ಇದೀಗ ಮಹತ್ವದ ನಿರ್ಧಾರ ಕೈಗೊಂಡಿರುವ ದೇವಳ, ಇನ್ಮುಂದೆ ಭಕ್ತರು ಲಡ್ಡು ಖರೀದಿಸಲು ಯಾವುದೇ ಮಿತಿ ಇರುವುದಿಲ್ಲ ಎಂದು ಹೇಳಿದೆ.
ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬೇಕೆಂದು ದೇವಸ್ಥಾನಕ್ಕೆ ಹೋಗುವ ಭಕ್ತರು ದೇವರ ಲಡ್ಡು ಪ್ರಸಾದವನ್ನೂ ಅಷ್ಟೇ ಪ್ರೀತಿಸುತ್ತಾರೆ. ಈವರೆಗೆ ಹೆಚ್ಚು ಲಡ್ಡು ಬೇಕೆನಿಸಿದವರು ದೇವಸ್ಥಾನದ ನಿಯಮದಿಂದಾಗಿ ನಿರಾಶೆಗೊಳ್ಳುತ್ತಿದ್ದರು. ಈಗ ದೇವಳದ ಆಡಳಿತ ಮಂಡಳಿ ನಿಯಮವನ್ನು ಸಡಿಲಗೊಳಿಸಿದೆ. ಶ್ರೀವಾರಿ ಲಡ್ಡು ಪ್ರಸಾದ ಮಾರಾಟದಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಭಕ್ತರು ಕೇಳಿದಷ್ಟೂ ಲಡ್ಡುಗಳನ್ನು ನೀಡಲು ಟಿಟಿಡಿ ಯೋಜನೆ ರೂಪಿಸುತ್ತಿದೆ. ಜೊತೆಗೆ, ತಯಾರಾಗುತ್ತಿರುವ ಲಡ್ಡುಗಳಿಗಿಂತ ಅಗತ್ಯಕ್ಕೆ ತಕ್ಕಂತೆ ಲಡ್ಡು ಪ್ರಸಾದ ತಯಾರಿಸಲು ಅಗತ್ಯ ಸಿಬ್ಬಂದಿ ನೇಮಕಕ್ಕೂ ಸಿದ್ಧತೆ ನಡೆಸುತ್ತಿದೆ.
ಪ್ರಸ್ತುತ, ಟಿಟಿಡಿ ಪ್ರತಿದಿನ 3.5 ಲಕ್ಷ ಸಣ್ಣ ಲಡ್ಡು, 6,000 ದೊಡ್ಡ ಲಡ್ಡು (ಕಲ್ಯಾಣಂ ಲಡ್ಡು), ಮತ್ತು 3,500 ವಡೆಗಳನ್ನು ತಯಾರಿಸುತ್ತಿದೆ. ಅದೇ ರೀತಿ, ಭಕ್ತರ ಅನುಕೂಲಕ್ಕಾಗಿ, ದೇವರ ಲಡ್ಡು ಪ್ರಸಾದವನ್ನು ತಿರುಮಲ ಅಲ್ಲದೆ, ಹೈದರಾಬಾದ್, ಬೆಂಗಳೂರು, ಚೆನ್ನೈ, ವಿಶಾಖಪಟ್ಟಣಂ, ಅಮರಾವತಿ ಮತ್ತು ತಿರುಪತಿಯ ಸ್ಥಳೀಯ ದೇವಸ್ಥಾನಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸಾಮಾನ್ಯವಾಗಿ ದರ್ಶನ ಪಡೆದ ಭಕ್ತರಿಗೆ ಒಂದು ಲಡ್ಡು ಉಚಿತವಾಗಿ ನೀಡಲಾಗುತ್ತದೆ. ಪ್ರತಿದಿನ ಸರಾಸರಿ 70 ಸಾವಿರ ಮಂದಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಈ ಲೆಕ್ಕಾಚಾರದ ಪ್ರಕಾರ 70 ಸಾವಿರ ಭಕ್ತರಿಗೆ ಉಚಿತ ಲಡ್ಡು ನೀಡಬೇಕು. ಇವುಗಳ ಜೊತೆಗೆ ಭಕ್ತರು ತಮ್ಮ ಬಂಧುಗಳು ಮತ್ತು ನೆರೆಹೊರೆಯವರಿಗೆ ಪ್ರಸಾದ ನೀಡಲು ಇನ್ನೂ ಹೆಚ್ಚು ಖರೀದಿಸುತ್ತಾರೆ.
ಸಾಮಾನ್ಯ ದಿನಗಳಲ್ಲಿ ಲಡ್ಡುಗಳಿಗೆ ತೊಂದರೆ ಇಲ್ಲದಿದ್ದರೂ ವಾರಾಂತ್ಯ, ವಿಶೇಷ ರಜೆ, ಬ್ರಹ್ಮೋತ್ಸವ ಹಾಗೂ ಇತರ ವಿಶೇಷ ದಿನಗಳಲ್ಲಿ ಬೇಡಿಕೆ ಹೆಚ್ಚಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಟಿಟಿಡಿ ಹೆಚ್ಚುವರಿಯಾಗಿ 50,000 ಸಣ್ಣ ಲಡ್ಡು, 4,000 ದೊಡ್ಡ ಲಡ್ಡು ಮತ್ತು 3,500 ವಡಾ ತಯಾರಿಸಲು ನಿರ್ಧರಿಸಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಈಗಿರುವ ಸಿಬ್ಬಂದಿಗೆ ಹೆಚ್ಚುವರಿಯಾಗಿ ಇನ್ನೂ 74 ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದು ಟಿಟಿಡಿ ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿ:ತಿರುಮಲ ಲಡ್ಡು ವಿಚಾರ: ದಿಂಡಿಗಲ್‌ನಲ್ಲಿ ಎಆರ್ ಡೈರಿ ಫುಡ್‌ಗಳ ವಿಚಾರಣೆಗೆ ಆಗಮಿಸಿದ ತಿರುಪತಿ ಪೊಲೀಸರು