ಅಗರ್ತಲಾ:ತ್ರಿಪುರಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿದೆ. ಘಟನೆಯಲ್ಲಿ ಮಗು, ಮೂರು ಮಹಿಳೆಯರು ಸೇರಿದಂತೆ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇದುವರೆಗೆ 20 ಮಂದಿ ಸಾವನ್ನಪ್ಪಿದ್ದಾರೆ.
ದಕ್ಷಿಣ ತ್ರಿಪುರಾ ಜಿಲ್ಲೆಯ ಸಂತಿರ್ಬಜಾರ್ನಲ್ಲಿ ಭೂ ಕುಸಿತದಿಂದ ಮನೆ ಕುಸಿದಿದ್ದು ಎರಡು ಕುಟುಂಬದ ಏಳು ಮಂದಿ ಸಾವನ್ನಪ್ಪಿದ್ದಾರೆ. ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ಜೊತೆಗೆ ಸ್ಥಳೀಯ ಜನರು ಅವಶೇಷದಡಿಯಲ್ಲಿ ಸಿಲುಕಿದ್ದ ಮೃತದೇಹ ಹೊರತೆಗೆದಿದ್ದಾರೆ. ಘಟನೆ ಕುರಿತು ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಮಣಿಕ್ ಸಹಾ, ಜಿಲ್ಲಾ ಆಡಳಿತವು ಸಂತ್ರಸ್ತ ಕುಟುಂಬಕ್ಕೆ 4 ಲಕ್ಷ ಆರ್ಥಿಕ ಸಹಾಯ ನೀಡುವುದಾಗಿ ಘೋಷಿಸಿದೆ.
ತ್ರಿಪುರಾದ 8 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ 65,500 ಜನರಿಗೆ 450 ನಿರಾಶ್ರಿತ ಕೇಂದ್ರದಲ್ಲಿ ಆಸರೆ ನೀಡಲಾಗಿದೆ. ಭಾರೀ ಮಳೆಯಿಂದ ರಾಜ್ಯದೆಲ್ಲೆಡೆ 17 ಲಕ್ಷ ಜನರ ಮೇಲೆ ಪರಿಣಾಮ ಬೀರಿದ್ದು, ಅಗರ್ತಲಾದಲ್ಲಿ ಬುಧವಾರ ಬೆಳಗ್ಗೆ 8.30ರಿಂದ ಗುರುವಾರ 8.30ರವರೆಗೆ 233 ಎಂಎಂ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಗುರುವಾರ ದಕ್ಷಿಣ ತ್ರಿಪುರಾದ ಜಿಲ್ಲೆಗಳಾದ ಬೊಗಫ್ ಸಂತಿಬಜಾರ್ನ ಉಪ ಕೇಂದ್ರದಲ್ಲಿ 493.6 ಮಿ.ಮೀ ಮಳೆಯಾಗಿದ್ದು, ತ್ರಿಪುರಾದ ಎಲ್ಲಾ ಎಂಟು ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಭಾರೀ ಮಳೆಯಾಗಿದೆ ಎಂದು ಐಎಂಡಿ ತಿಳಿಸಿದೆ.
ಜನರ ಸಹಾಯ ಕೋರಿದ ಸಿಎಂ ಸಹಾ: ರಾಜ್ಯದ ಹಲವು ಭಾಗಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ರಕ್ಷಣಾ ಕಾರ್ಯದಲ್ಲಿ ಎನ್ಡಿಆರ್ಎಫ್ ಮತ್ತು ಸರ್ಕಾರಕ್ಕೆ ಸಹಾಯ ಮತ್ತು ಸಹಕಾರ ನೀಡುವಂತೆ ಜನರಿಗೆ ತ್ರಿಪುರಾ ಸಿಎಂ ಸಹಾ ಮನವಿ ಮಾಡಿದ್ದಾರೆ.
ಗುರುವಾರ ಬಟ್ಟಲಾದ ಬಿಆರ್ ಅಂಬೇಡ್ಕರ್ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಕೇಂದ್ರ ಸರ್ಕಾರದಿಂದ ಎಲ್ಲಾ ಅಗತ್ಯ ಸಹಾಯ ಸಿಕ್ಕಿದೆ. ನಾಳೆ ಹವಾಮಾನ ಅವಕಾಶ ನೀಡಿದರೆ, ಹೆಲಿಕ್ಯಾಪ್ಟರ್ ಮೂಲಕ ಪರಿಸ್ಥಿತಿ ಅವಲೋಕನ ನಡೆಸಲಾಗುವುದು. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಡಬಲ್ ಎಂಜಿನ್ ಸರ್ಕಾರದಿಂದ ನಾವು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯವಾಗಿದೆ ಎಂದಿದ್ದಾರೆ. ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪರ್ಕಿಸಿದ್ದು, ಎಲ್ಲಾ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. (ಐಎಎನ್ಎಸ್/ಎಎನ್ಐ)
ಇದನ್ನೂ ಓದಿ: ಕಾಡು ಮಧ್ಯೆ ಮಳೆಯಲ್ಲೇ ಟರ್ಪಲ್ ಆಸರೆಯಲ್ಲಿ ತಂದೆಯ ಅಂತ್ಯಕ್ರಿಯೆ ನೆರವೇರಿಸಿದ 5 ವರ್ಷದ ಮಗಳು