ಮುಂಬೈ: 2008ರ ನವೆಂಬರ್ 26ರಂದು ಮುಂಬೈ ಮೇಲೆ ಪಾಕಿಸ್ತಾನಿ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ ಹೋರಾಡಿ ಮಡಿದ ಹುತಾತ್ಮರಿಗೆ ಇಂದು ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಥೆ ಪುಷ್ಪನಮನ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಿದರು.
ದಕ್ಷಿಣ ಮುಂಬೈನಲ್ಲಿರುವ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿರುವ ಸ್ಮಾರಕಕ್ಕೆ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವರ್ ಕೂಡ ಹುತಾತ್ಮರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗು ದಾಳಿಯಲ್ಲಿ ಮಡಿದ ಪೊಲೀಸ್ ಸಿಬ್ಬಂದಿಗಳ ಕುಟುಂಬಸ್ಥರೂ ಕೂಡ ಹಾಜರಿದ್ದು, ಗೌರವ ಸಲ್ಲಿಸಿದರು.
2008ರ ನವೆಂಬರ್ 26ರಂದು ಮುಂಬೈನ ಹಲವು ಪ್ರತಿಷ್ಟಿತ ಪ್ರದೇಶಗಳಿಗೆ ನುಗ್ಗಿದ 10ಕ್ಕೂ ಹೆಚ್ಚು ಭಯೋತ್ಪಾದಕರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 166 ಮಂದಿ ಸಾವನ್ನಪ್ಪಿ, 300 ಜನರು ಗಾಯಗೊಂಡಿದ್ದರು.
ಸಮುದ್ರ ಮಾರ್ಗದ ಮೂಲಕ ಮುಂಬೈ ಹೊಕ್ಕ ಲಷ್ಕರ್-ಎ-ತೊಯ್ಬಾ ಸಂಘಟನೆಯ ಶಸ್ತ್ರಸಜ್ಜಿತ ಉಗ್ರರು, ತಾಜ್ ಮಹಲ್ ಪ್ಯಾಲೇಸ್ ಹೋಟೆಲ್, ಒಬೆರಾಯ್ ಟ್ರೈಡೆಂಟ್ ಹೋಟೆಲ್, ಸಿಎಸ್ಟಿ ರೈಲ್ವೆ ಸ್ಟೇಷನ್ ಮತ್ತು ನರಿಮನ್ ಹೌಸ್ನಲ್ಲಿ ಗುಂಡಿನ ಮಳೆ ಹರಿಸಿದ್ದರು.
ಈ ದಾಳಿಗೆ ಜಾಗತಿಕವಾಗಿ ಖಂಡನೆ ವ್ಯಕ್ತವಾಗಿತ್ತು. ನಂತರದಲ್ಲಿ ಭಾರತ ತನ್ನ ಭಯೋತ್ಪಾದನಾ ನಿಗ್ರಹ ಕ್ರಮಗಳಲ್ಲಿ ಗಮನಾರ್ಹ ಬದಲಾವಣೆ ಮಾಡಿತು.
ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಮಹಾಕುಂಭ ಮೇಳದ ರೋಡ್ ಶೋ ನಡೆಸಲು ಯುಪಿ ಸರ್ಕಾರ ನಿರ್ಧಾರ: ಪ್ರತಿಪಕ್ಷಗಳಿಂದ ಟೀಕೆ