ನವದೆಹಲಿ: ಇಂದು ಸಂಜೆ 7:15ಕ್ಕೆ ನಡೆಯಲಿರುವ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ 50 ಮಂದಿ ತೃತೀಯಲಿಂಗಿ ಸಮುದಾಯದವರನ್ನು ಆಹ್ವಾನಿಸಲಾಗಿದೆ. ಇದಕ್ಕೂ ಮುನ್ನ ಬಿಜೆಪಿ ಸಂಸದ ಹಾಗೂ ಮಾಜಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಅವರು ತೃತೀಯಲಿಂಗಿ ಸಮುದಾಯದವರನ್ನು ತಮ್ಮ ನಿವಾಸದಲ್ಲಿ ಸನ್ಮಾನಿಸಿದರು.
ಬಳಿಕ ಮಾತನಾಡಿದ ವೀರೇಂದ್ರ ಕುಮಾರ್, ಇದು 'ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಮತ್ತು ಸಭಾ ಪ್ರಯಾಸ್' ಎಂಬ ಪ್ರಧಾನಿ ಮೋದಿಯವರ ಕರೆಯ ಭಾಗವಾಗಿದೆ. ಸಮಾರಂಭದಲ್ಲಿ ತೃತೀಯ ಲಿಂಗಿಗಳು ಭಾಗವಹಿಸುತ್ತಿರುವುದು ಪ್ರಧಾನಿಯವರ ಎಲ್ಲರೂ ಒಳಗೊಳ್ಳುವಿಕೆಯ ಸಂದೇಶದ ಮಹತ್ವವನ್ನು ಹೆಚ್ಚಿಸುತ್ತದೆ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಇದೇ ಮೊದಲ ಬಾರಿಗೆ ತೃತೀಯಲಿಂಗಿ ಸಮುದಾಯದವರನ್ನು ಔಪಚಾರಿಕವಾಗಿ ಆಹ್ವಾನಿಸಲಾಗಿದೆ. ಸಮಾರಂಭದಲ್ಲಿ ಭಾಗವಹಿಸಲಿರುವವರು ತಮ್ಮ ಸಮುದಾಯದ ಸಬಲೀಕರಣಕ್ಕೆ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.