ಪಾಟ್ನಾ: ರೈಲು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ ಎಂಬ ಕೇಂದ್ರ ಸಚಿವ ಲಾಲನ್ ಸಿಂಗ್ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ತಮಿಳುನಾಡಿನಲ್ಲಿ ನಡೆದ ಮೈಸೂರು-ದರ್ಭಂಗಾ ಬಾಗ್ಮತಿ ಎಕ್ಸ್ಪ್ರೆಸ್ ರೈಲು ಅಪಘಾತದ ಬಗ್ಗೆ ಈ ರೀತಿಯ ಸಂವೇದನಾರಹಿತ ಹೇಳಿಕೆ ನೀಡುವ ಮೂಲಕ ಸಚಿವರು ಆಘಾತ ಮೂಡಿಸಿದ್ದಾರೆ. "ಅರೇ.. ಟ್ರೇನ್ ಆ್ಯಕ್ಸಿಡೆಂಟ್ಸ್ ಹೋತಾ ರೆಹ್ತಾ ಹೈ.." ಎಂದು ಅವರು ಶನಿವಾರ ಹೇಳಿದ್ದಾರೆ.
ಮೈಸೂರು-ದರ್ಭಂಗಾ ಬಾಗ್ಮತಿ ಎಕ್ಸ್ ಪ್ರೆಸ್ ರೈಲು ತಮಿಳುನಾಡಿನ ಕವರಪೆಟ್ಟೈನಲ್ಲಿ ನಿಂತಿದ್ದ ಸರಕು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ.
"12578 ಸಂಖ್ಯೆಯ ರೈಲು 20:27 ಗಂಟೆಗೆ ಪೊನ್ನೇರಿಯನ್ನು ದಾಟಿದೆ. ಈ ಸಂದರ್ಭದಲ್ಲಿ ರೈಲು ಲೂಪ್ ಲೈನ್ ಅನ್ನು ಪ್ರವೇಶಿಸಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಕೆಲವರು ಗಾಯಗೊಂಡಿದ್ದಾರೆ" ಎಂದು ರೈಲ್ವೆ ಇಲಾಖೆಯ ಹೇಳಿಕೆ ತಿಳಿಸಿದೆ. ಅಪಘಾತದ ರಭಸಕ್ಕೆ ಎಕ್ಸ್ ಪ್ರೆಸ್ ರೈಲಿನ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 13 ಬೋಗಿಗಳು ಹಳಿ ತಪ್ಪಿವೆ.
ಘಟನೆಯ ಬಗ್ಗೆ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತ್ ರಾಜ್ ಸಚಿವ ಲಾಲನ್ ಸಿಂಗ್, ಇಂಥ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ ಎಂದು ಹಗುರವಾಗಿ ಮಾತನಾಡಿದ್ದಾರೆ.