ನವದೆಹಲಿ:ಪಶ್ಚಿಮ ಬಂಗಾಳದಲ್ಲಿ ಸೋಮವಾರ ಮುಂಜಾನೆ ಕಾಂಚನಜುಂಗಾ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲಿನ ನಡುವೆ ಡಿಕ್ಕಿ ಸಂಭವಿಸಿ ಸಾವು ನೋವಿಗೆ ಕಾರಣವಾಗಿದೆ. ಗಮನಾರ್ಹ ಸಂಗತಿ ಎಂದರೆ, ಅಪಘಾತಕ್ಕೀಡಾದ ಪ್ರದೇಶದಲ್ಲಿ ಕವಚ ವ್ಯವಸ್ಥೆ ಅಳವಡಿಸಿರಲಿಲ್ಲ. ದೇಶದ ಎಲ್ಲೆಡೆಯೂ ರೈಲ್ವೆ ಸುರಕ್ಷತೆ ಮತ್ತು ಮಹತ್ವಾಕಾಂಕ್ಷಿ 'ಕವಚ' ವ್ಯವಸ್ಥೆ ಅಳವಡಿಸಬೇಕು ಎಂಬ ಮಾತುಗಳು ಕೇಳಿಬಂದಿವೆ.
ರೈಲ್ವೇ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಈಟಿವಿ ಭಾರತ ಜೊತೆಗೆ ಮಾತನಾಡಿ, ಘಟನೆಗೆ ಮುಖ್ಯ ಕಾರಣ ಏನು ಎಂಬುದು ತನಿಖೆಯಲ್ಲಿ ತಿಳಿದುಬರಬೇಕಿದೆ. ವಿವಿಧ ರೈಲು ವಿಭಾಗಗಳಲ್ಲಿ ಕವಚ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಇನ್ನೂ ವಿಸ್ತರಣೆಯ ಹಂತದಲ್ಲಿದೆ. ಅಪಘಾತಕ್ಕೀಡಾದ ಭಾಗದಲ್ಲಿ ಕವಚ ಇರಲಿಲ್ಲ ಎಂದು ತಿಳಿಸಿದ್ದಾರೆ.
ಅಪಘಾತದ ಬಗ್ಗೆ ವಿವರ ನೀಡಿದ ಅವರು ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿಇ ಜಯವರ್ಮ ಸಿನ್ಹಾ ಅವರು, ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳಿಸಲಾಗಿದೆ. 15 ಮಂದಿ ಸಾವಿಗೀಡಾಗಿ, 50 ಮಂದಿ ಗಾಯಗೊಂಡಿದ್ದಾರೆ. ಎಲ್ಲರನ್ನೂ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರೈಲು ಸಂಚಾರಕ್ಕಾಗಿ ಹಳಿಗಳನ್ನು ಸಜ್ಜು ಮಾಡಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು ದುರಂತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಬಂಗಾಳದಲ್ಲಿ ನಡೆದ ರೈಲ್ವೆ ಅಪಘಾತ ದುಃಖಕರವಾಗಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿ ಪ್ರಧಾನಿ ಮೋದಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಮೃತ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಅಪಘಾತದ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದರು.
ಕವಚ್ ಸಿಸ್ಟಂ ಹೇಗೆ ಕೆಲಸ ಮಾಡುತ್ತೆ?:ಸ್ವದೇಶಿ ನಿರ್ಮಿತ ತಂತ್ರಜ್ಞಾನ ಇದಾಗಿದೆ. ದೇಶದಲ್ಲಿ ರೈಲುಗಳ ಅಪಘಾತಗಳನ್ನು ಶೂನ್ಯಕ್ಕೆ ಇಳಿಸುವ ಉದ್ದೇಶವಿದೆ. ಕವಚ್ ತಂತ್ರಜ್ಞಾನ ಸೆನ್ಸಾರ್ ಆಧಾರಿತವಾಗಿದೆ. ಇದನ್ನು ಪ್ರತಿ ರೈಲಿನ ಇಂಜಿನ್ನಲ್ಲಿ ಅಳವಡಿಸಲಾಗುತ್ತದೆ. ಇದು ಯಾವಾಗಲೂ ಚಾಲನೆಯಲ್ಲಿರುತ್ತದೆ. ಹಳಿಯಲ್ಲಿ ರೈಲು ಸಾಗುವಾಗ ಎದುರಿಗೆ ಮತ್ತೊಂದು ರೈಲು ಬರುತ್ತಿದ್ದರೆ, ಅಥವಾ ಅದೇ ಹಳಿಯಲ್ಲಿ ಇನ್ನೊಂದು ರೈಲು ಹೋಗುತ್ತಿದ್ದರೆ, ಹಳಿಯ ಮೇಲೆ ಮರದ ದಿಮ್ಮಿ, ಕಲ್ಲು, ಅಥವಾ ಹಳಿ ಮುರಿದಿದ್ದರೆ ಅಪಾಯದ ಮುನ್ಸೂಚನೆಯನ್ನು ಗ್ರಹಿಸಿ ತನ್ನಲ್ಲಿನ ಆಂತರಿಕ ನಿರ್ವಹಣಾ ವ್ಯವಸ್ಥೆಗೆ ಸೂಚನೆಗಳನ್ನು ಕಳುಹಿಸುತ್ತದೆ.
ಈ ಸಿಗ್ನಲ್ಗಳ ನೆರವಿನಿಂದ ಇಂಟರ್ನಲ್ ಮ್ಯಾನೇಜ್ಮೆಂಟ್ ಸಿಸ್ಟಂ ಆಟೋಮ್ಯಾಟಿಕ್ ಆಗಿ ರೈಲುಗಳ ಬ್ರೇಕ್ಗಳನ್ನು ಹಾಕುತ್ತದೆ. ಇದರಿಂದ ರೈಲುಗಳ ನಡುವೆ ಕನಿಷ್ಠ 380 ಮೀಟರ್ ಅಂತರದಲ್ಲಿ ರೈಲುಗಳನ್ನು ನಿಲುಗಡೆ ಮಾಡುತ್ತದೆ. ಈ ಮೂಲಕ ಅಪಘಾತ ತಡೆಯುತ್ತದೆ.
ಇದನ್ನೂ ಓದಿ:ಕಾಂಚನಜುಂಗಾ ಎಕ್ಸ್ಪ್ರೆಸ್ಗೆ ಡಿಕ್ಕಿ ಹೊಡೆದ ಗೂಡ್ಸ್ ರೈಲು: ಸಾವಿನ ಸಂಖ್ಯೆ 15ಕ್ಕೆ ಏರಿಕೆ, 60ಕ್ಕೂ ಹೆಚ್ಚು ಜನರಿಗೆ ಗಾಯ - Kanchenjunga Express train accident