ಅಮರಾವತಿ(ಆಂಧ್ರ ಪ್ರದೇಶ): ತಿರುಪತಿಯಲ್ಲಿ ನಿನ್ನೆ ಕಾಲ್ತುಳಿತಕ್ಕೊಳಗಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನರನ್ನು ಇಂದು ಆಂಧ್ರ ಪ್ರದೇಶ ಸಿಎಂ ಎನ್.ಚಂದ್ರಬಾಬು ನಾಯ್ಡು ಭೇಟಿಯಾಗಲಿದ್ದಾರೆ.
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ತಿರುಮಲದಲ್ಲಿನ ವೆಂಕಟೇಶ್ವರ ಸ್ವಾಮಿ ದರ್ಶನದ ಟೋಕನ್ ಟಿಕೆಟ್ ಪಡೆಯುವಾಗ ಉಂಟಾದ ಕಾಲ್ತುಳಿತದಲ್ಲಿ 6 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಗಾಯಾಳಗಳನ್ನು ಎಸ್ವಿಆರ್ ರುಯಾ ಸರ್ಕಾರಿ ಜನರಲ್ ಆಸ್ಪತ್ರೆ ಮತ್ತು ಎಸ್‌ವಿಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಯ ಕುರಿತು ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತೆಲಗು ದೇಶಂ ಪಕ್ಷದ(ಟಿಡಿಪಿ) ವಕ್ತಾರರು ತಿಳಿಸಿದ್ದಾರೆ.
ಟಿಡಿಪಿ ರಾಷ್ಟ್ರೀಯ ವಕ್ತಾರ ಪ್ರೇಮ್ ಕುಮಾರ್ ಜೈನ್ ಮಾತನಾಡಿ, "ಈ ಘಟನೆ ದುರದೃಷ್ಟಕರ. ಇಂಥ ಘಟನೆಗಳು ಮರುಕಳಿಸದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಿಎಂ ಅಧಿಕಾರಿಗಳ ಸಭೆ ಕರೆದಿದ್ದಾರೆ. ಗಾಯಾಳುಗಳ ಚಿಕಿತ್ಸೆಗೆ ನಮ್ಮ ಸರ್ಕಾರ ಎಲ್ಲಾ ಅಗತ್ಯ ಸಹಾಯ ನೀಡಲಿದೆ" ಎಂದರು.