ರಾಯ್ಪುರ್ (ಛತ್ತೀಸ್ಗಢ): ಛತ್ತೀಸ್ಗಢದ ಸುಕ್ಮಾದಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ನಡೆದ ಎನ್ಕೌಂಟರ್ನಲ್ಲಿ ಮೂವರು ನಕ್ಸಲರು ಹತರಾಗಿದ್ದಾರೆ ಎಂದು ಉಪ ಮುಖ್ಯಮಂತ್ರಿ ವಿಜಯ್ ಶರ್ಮಾ ತಿಳಿಸಿದ್ದಾರೆ.
ಸುಕ್ಮಾದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ಭದ್ರತಾ ಪಡೆ ಯಶಸ್ವಿಯಾಗಿ ನಡೆಸಿದೆ. ಗುಂಡಿನ ದಾಳಿಗೆ ಒಳಗಾದ ಮೂವರ ನಕ್ಸಲರ ಮೃತದೇಹವನ್ನು ವಶಕ್ಕೆ ಪಡೆಯಲಾಗಿದ್ದು, ಶೋಧಕಾರ್ಯ ಮುಂದುವರಿದಿದೆ ಎಂದು ರಾಯ್ಪುರದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಮಾಹಿತಿ ನೀಡಿದರು.
ಬಿಜಾಪುರ್ನಲ್ಲಿ ಜನವರಿ 6ರಂದು ಐಇಡಿ ಬಾಂಬ್ ಸ್ಫೋಟಿಸಿ ಎಂಟು ಮಂದಿ ಭದ್ರತಾ ಸಿಬ್ಬಂದಿ ಹಾಗೂ ಕಾರು ಚಾಲಕನ ಸಾವಿನ ಘಟನೆ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಶರ್ಮಾ, ನಕ್ಸಲರು ಮಾಡಿದ ಈ ಕೃತ್ಯದಿಂದಾಗಿ ಭದ್ರತಾ ಪಡೆ ಸಿಬ್ಬಂದಿಗಳಲ್ಲಿ ಸಾಕಷ್ಟು ಕೋಪಕ್ಕೆ ಕಾರಣವಾಗಿತ್ತು. ಭದ್ರತಾ ಪಡೆಯನ್ನು ನಾನು ಭೇಟಿಯಾದಾಗ, ಅವರು ನಕ್ಸಲರ ಹಾವಳಿಯನ್ನು ನಿಗದಿತ ಸಮಯದಲ್ಲಿ ನಿರ್ನಾಮ ಮಾಡುವುದಾಗಿ ತಿಳಿಸಿದರು ಎಂದರು.
2026ರ ಮಾರ್ಚ್ ಹೊತ್ತಿಗೆ ದೇಶದಲ್ಲಿ ನಕ್ಸಲರನ್ನು ನಿರ್ಮೂಲನೆ ಮಾಡಲಾಗುವುದು ಎಂಬ ಪಣದ ಪುನರ್ ಉಚ್ಚಾರವನ್ನು ಕೂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದರು. ಅಲ್ಲದೇ ಬಾಂಬ್ ಸ್ಫೋಟದಲ್ಲಿ ಹುತಾತ್ಮರಾದ ನಮ್ಮ ಯೋಧರ ಶ್ರಮವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು.