ನವದೆಹಲಿ: 80 ರಿಂದ 90 ಬಾರಿ ಜನರಿಂದ ತಿರಸ್ಕೃತರಾದವರು ತಮ್ಮ ರಾಜಕೀಯ ಲಾಭಕ್ಕಾಗಿ ಗೂಂಡಾಗಿರಿಯ ಮೂಲಕ ಸಂಸತ್ತನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, "ಅಂಥ ಬೆರಳೆಣಿಕೆಯಷ್ಟು ಜನರು ತಮ್ಮ ಉದ್ದೇಶಗಳಲ್ಲಿ ಯಶಸ್ವಿಯಾಗಲಿಲ್ಲ. ಆದರೆ ದೇಶದ ಜನರು ಅವರ ಕಾರ್ಯಗಳನ್ನು ಗಮನಿಸಿದ್ದು, ತಕ್ಕ ಸಮಯದಲ್ಲಿ ಅವರಿಗೆ ಶಿಕ್ಷೆ ನೀಡಿದ್ದಾರೆ" ಎಂದು ಹೇಳಿದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು 235 ಸ್ಥಾನಗಳನ್ನು ಗೆದ್ದು, ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿಯನ್ನು 288 ಸದಸ್ಯರ ವಿಧಾನಸಭೆಯಲ್ಲಿ 49 ಸ್ಥಾನಗಳಿಗೆ ಸೀಮಿತಗೊಳಿಸಿದ ಕೆಲವೇ ದಿನಗಳ ನಂತರ ಮೋದಿ ಅವರ ಈ ಹೇಳಿಕೆ ಗಮನಾರ್ಹ. ಇದಕ್ಕೂ ಮುನ್ನ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಚ್ಚರಿಯ ಗೆಲುವು ದಾಖಲಿಸಿತ್ತು.
"ಸಂಸತ್ತಿನಲ್ಲಿ ಆರೋಗ್ಯಕರ ಚರ್ಚೆ ನಡೆಯಬೇಕು. ಆದರೆ, ದುರದೃಷ್ಟವಶಾತ್ ಕೆಲ ವ್ಯಕ್ತಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಸಂಸತ್ತನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಅಡೆತಡೆ ಉಂಟುಮಾಡಿ ಅವ್ಯವಸ್ಥೆ ಸೃಷ್ಟಿಸುತ್ತಿದ್ದಾರೆ" ಎಂದು ಮೋದಿ ಆರೋಪಿಸಿದರು.