ಪ್ರಯಾಗ್‌ರಾಜ್(ಉತ್ತರ ಪ್ರದೇಶ):'ಸಂಕಟ ಬಂದಾಗ ವೆಂಕಟರಮಣ' ಎನ್ನುತ್ತೇವೆ. ಜೀವನದಲ್ಲಿ ಕಷ್ಟಗಳು ಎದುರಾದಾಗ ದೇವರ ಮೊರೆ ಹೋಗುತ್ತೇವೆ. ದುರಿತಗಳನ್ನು ಪರಿಹರಿಸು ಎಂದು ಬೇಡುತ್ತೇವೆ. ಆದರೆ, ಇಲ್ಲೊಬ್ಬ ಕಳ್ಳ ದೇವಸ್ಥಾನದಲ್ಲಿನ ದೇವರನ್ನೇ ಕದ್ದಿದ್ದ. ಬಳಿಕವೇ ನೋಡಿ ಆತನಿಗೆ ಸಮಸ್ಯೆ ಶುರುವಾಗಿದ್ದು. ಹಲವು ಸಂಕಷ್ಟಗಳಿಗೆ ಸಿಲುಕಿದ ಆತ, ತಾನು ಮಾಡಿದ ತಪ್ಪಿನ ಅರಿವಾಗಿ ದೇವರ ವಿಗ್ರಹವನ್ನು ದೇವಸ್ಥಾನಕ್ಕೆ ಮರಳಿಸಿದ್ದಾನೆ. ಜೊತೆಗೆ, ಕ್ಷಮಾಪಣಾ ಪತ್ರವನ್ನೂ ಬರೆದಿದ್ದಾನೆ.
ಹೌದು, ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ. ದೇವರ ವಿಗ್ರಹ ಕದ್ದ ಕಳ್ಳ, ಕಷ್ಟಗಳಿಗೆ ತುತ್ತಾಗಿ ವಿಗ್ರಹವನ್ನು ಮರಳಿ ದೇವಸ್ಥಾನದಲ್ಲಿ ತಂದಿಟ್ಟಿದ್ದಾನೆ. ಜೊತೆಗೆ, ತನ್ನನ್ನು ಕ್ಷಮಿಸಿ ಎಂದು ಕೋರಿದ್ದಾನೆ. ಆದರೆ, ವಿಗ್ರಹ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ಕಳ್ಳನ ಪತ್ತೆ ಕಾರ್ಯ ನಡೆಸಿದ್ದಾರೆ.
ಪ್ರಕರಣದ ಪೂರ್ಣ ವಿವರ:ಪ್ರಯಾಗ್‌ರಾಜ್ ಜಿಲ್ಲೆಯ ಶೃಂಗವರ್‌ಪುರ ಧಾಮ್ ಬಳಿಯ ರಾಧಾ-ಕೃಷ್ಣ ದೇವಸ್ಥಾನದಲ್ಲಿನ 150 ವರ್ಷಗಳಷ್ಟು ಹಳೆಯದಾದ ರಾಧಾ-ಕೃಷ್ಣನ ವಿಗ್ರಹವನ್ನು ಕಳ್ಳನೊಬ್ಬ ಸೆಪ್ಟೆಂಬರ್ 23ರಂದು ದೇವಸ್ಥಾನದ ಬಾಗಿಲಿನ ಬೀಗ ಮುರಿದು ಕದ್ದೊಯ್ದಿದ್ದ. ಮರುದಿನ ಬೆಳಗ್ಗೆ ನಿತ್ಯ ಪೂಜೆಯ ವೇಳೆ ಅರ್ಚಕರು ವಿಗ್ರಹ ಇಲ್ಲದ್ದನ್ನು ಕಂಡಿದ್ದಾರೆ. ಬಳಿಕ ಅವರು, ನವಾಬ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವಿಗ್ರಹದ ಪತ್ತೆಗೆ ಹುಡುಕಾಡುತ್ತಿದ್ದರು.