ನವದೆಹಲಿ: ಭಾರತದ ಚುನಾವಣೆ ವ್ಯವಸ್ಥೆಯಿಂದ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ತೆಗೆದುಹಾಕುವಂತೆ ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ಕರೆ ನೀಡಿದ ಬೆನ್ನಲ್ಲೇ ಈಗ ಕಾಂಗ್ರೆಸ್ನ ಹಿರಿಯ ನಾಯಕ ರಾಹುಲ್ ಗಾಂಧಿ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಇವಿಎಂಗಳು ಯಾರೂ ಪರಿಶೀಲನೆ ಮಾಡಲು ಸಾಧ್ಯವಾಗದಂಥ ಒಂದು ರೀತಿಯ ಕಪ್ಪು ಪೆಟ್ಟಿಗೆಗಳಾಗಿವೆ ಎಂದು ಭಾನುವಾರ ರಾಹುಲ್ ಗಾಂಧಿ ಹೇಳಿದ್ದಾರೆ. ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಬಗ್ಗೆ ಉಂಟಾದ ವಿವಾದಕ್ಕೆ ಸಂಬಂಧಿಸಿದ ಸುದ್ದಿಯ ವರದಿಯನ್ನು ಅವರು ಉಲ್ಲೇಖಿಸಿದ್ದಾರೆ.
"ಭಾರತದಲ್ಲಿನ ಇವಿಎಂಗಳು ಕಪ್ಪು ಪೆಟ್ಟಿಗೆಯಾಗಿದ್ದು, ಅವುಗಳನ್ನು ಪರಿಶೀಲಿಸಲು ಯಾರಿಗೂ ಅವಕಾಶವಿಲ್ಲ. ಹೀಗಾಗಿ ನಮ್ಮ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಗಂಭೀರ ಸಂಶಯಗಳು ಮೂಡುವಂತಾಗಿದೆ" ಎಂದು ರಾಹುಲ್ ಗಾಂಧಿ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
"ಸರ್ಕಾರಿ ಸಂಸ್ಥೆಗಳ ವಿಶ್ವಾಸಾರ್ಹತೆಯು ಪ್ರಶ್ನಾರ್ಹವಾದಾಗ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ಉಂಟಾಗುತ್ತದೆ ಮತ್ತು ವ್ಯವಸ್ಥೆಯು ವಂಚನೆಗೆ ಗುರಿಯಾಗುತ್ತದೆ" ಎಂದು ಪೋಸ್ಟ್ ಮಾಡಿರುವ ರಾಹುಲ್, ಮುಂಬೈ ವಾಯುವ್ಯ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಯ ಸಂಬಂಧಿಕರೊಬ್ಬರು ತಮ್ಮ ಫೋನ್ ಅನ್ನು ಇವಿಎಂಗಳೊಂದಿಗೆ ಸಂಪರ್ಕಿಸಿದ್ದಾರೆ ಎಂಬ ಸುದ್ದಿ ವರದಿಯ ತುಣುಕನ್ನು ಇದರೊಂದಿಗೆ ಟ್ಯಾಗ್ ಮಾಡಿದ್ದಾರೆ.