ನವದೆಹಲಿ:ಜಗನ್ ಅವರ ಅಕ್ರಮ ಆಸ್ತಿಪಾಸ್ತಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು. ಸಿಬಿಐ ತನಿಖೆ ಏಕೆ ವಿಳಂಬವಾಗುತ್ತಿದೆ ಎಂಬ ಕಾರಣ ನೀಡುವಂತೆ ಸೂಚಿಸಿತು. ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಾಂಕರ್ ದತ್ತಾ ಅವರಿದ್ದ ಪೀಠವು ನಾಲ್ಕು ವಾರಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.
ಡಿಸ್ಚಾರ್ಜ್ ಅರ್ಜಿಗಳು ವಿಳಂಬಕ್ಕೆ ಕಾರಣವಾಗುತ್ತಿವೆ ಎಂದು ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ ರಾಜು ನ್ಯಾಯಾಲಯಕ್ಕೆ ತಿಳಿಸಿದರು. ರಾಜಕೀಯ ಕಾರಣಗಳಿಗಾಗಿ ವಿಚಾರಣೆಯನ್ನು ವಿಳಂಬ ಮಾಡಬಾರದು ಎಂದು ಪೀಠ ಅಭಿಪ್ರಾಯಪಟ್ಟಿದೆ. ವಿಚಾರಣೆ ಸರಿಯಾಗಿ ನಡೆಯುತ್ತಿದೆ ಎಂದು ಸಿಬಿಐ ಪೀಠಕ್ಕೆ ತಿಳಿಸಿತು. ವಿಚಾರಣೆ ಸರಿಯಾಗಿ ನಡೆಯುತ್ತಿದೆ ಅಂತಾ ಹೇಳುವುದಲ್ಲ, ಅಫಿಡವಿಟ್ ಅನ್ನು ಏಕೆ ಸಲ್ಲಿಸಿಲ್ಲ ಎಂಬುದನ್ನು ತಿಳಿಸಿ ಅಂತಾ ನ್ಯಾಯಮೂರ್ತಿ ಸಂಜೀವ್ ಖನ್ನಾ ಹೇಳಿದರು.
ಮುಖ್ಯಮಂತ್ರಿಯವರಿಂದಾಗಿ ವಿಚಾರಣೆ ವಿಳಂಬವಾಗುತ್ತಿದೆ ಎಂಬುದೇ ಪ್ರಮುಖ ಆರೋಪವಾಗಿದ್ದು, ಇದಕ್ಕೆ ಏನು ಉತ್ತರ ನೀಡುತ್ತೀರಿ ಎಂದು ಕೋರ್ಟ್ ಹೇಳಿದೆ. ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡುವಂತೆ ಸಿಎಂ ಏಕೆ ಕೇಳುತ್ತಿದ್ದಾರೆ ಎಂದು ಪೀಠ ಪ್ರಶ್ನಿಸಿತು. ಸುದೀರ್ಘ ಕಾಲ ವಿಚಾರಣೆ ನಡೆಯುತ್ತಿದ್ದರೆ ವೈಯಕ್ತಿಕ ಹಾಜರಾತಿಗೆ ವಿನಾಯಿತಿ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.