ಹೆದರದೇ ಚಿರತೆಯನ್ನು ಮನೆಯೊಳಗೆ ಕೂಡಿಹಾಕಿದ ಬಾಲಕ ನಾಶಿಕ್(ಮಹಾರಾಷ್ಟ್ರ): ಜಿಲ್ಲೆಯ ಮಾಲೇಗಾಂವ್ ಪಟ್ಟಣದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ. ಈ ಚಿರತೆ ಮನೆಯೊಂದಕ್ಕೆ ನುಗ್ಗಿದ ಕೂಡಲೇ ಬಾಲಕನೊಬ್ಬ ಚಾಣಾಕ್ಷತನದಿಂದ ಅದನ್ನು ಕೂಡಿ ಹಾಕಿ ಹೊರ ಹೋಗಿದ್ದಾನೆ. ಬಳಿಕ ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿದೆ. ಪರಿಸ್ಥಿತಿಯನ್ನು ನಿರ್ಭೀತವಾಗಿ ಎದುರಿಸಿದ ಬಾಲಕನ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಬಾಲಕನ ಸಮಯಪ್ರಜ್ಞೆ : ಮಾಲೇಗಾಂವ್ ನಗರದಲ್ಲಿ ಕಳೆದ ಕೆಲ ದಿನಗಳಿಂದ ಚಿರತೆಗಳ ಓಡಾಟ ಮುಕ್ತವಾಗಿದ್ದರಿಂದ ಆ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅದರಂತೆ ಮಾಲೇಗಾಂವ್‌ನ ನಾಂಪುರ ರಸ್ತೆಯ ಪಕ್ಕದಲ್ಲಿರುವ ಮನೆಯೊಂದರೊಳಗೆ ಚಿರತೆ ನುಗ್ಗಿದೆ. ಈ ವೇಳೆ ಚಿಕ್ಕ ಬಾಲಕ ಮೋಹಿತ್ ವಿಜಯ್ ಅಹಿರೆ ತನ್ನ ಮೊಬೈಲ್ನಲ್ಲಿ ಗೇಮ್ ಆಡುತ್ತಿದ್ದನು. ಆಗ ಚಿರತೆ ಮನೆಯೊಳಗೆ ನುಗ್ಗಿರುವುದನ್ನು ಕಂಡಿದ್ದಾನೆ. ಸಮಯಪ್ರಜ್ಞೆ ಮೆರೆದ ಆತ ಒಂದು ಕ್ಷಣವೂ ಯೋಚಿಸದೆ, ಧೈರ್ಯದಿಂದ ಆ ಚಿರತೆಯನ್ನು ಮನೆಯೊಳಗೆ ಬಿಟ್ಟು ಹೊರಗಿನಿಂದ ಬಾಗಿಲು ಹಾಕಿದ್ದಾನೆ.
ಮನೆಯೊಳಗೆ ಚಿರತೆ ಕೂಡಿ ಹಾಕಿರುವ ಸುದ್ದಿಯನ್ನು ಮೋಹಿತ್ ಪೋಷಕರಿಗೆ ತಿಳಿಸಿದ್ದಾನೆ. ಕೂಡಲೇ ಈ ಮಾಹಿತಿಯನ್ನು ಪೋಷಕರು ಮತ್ತು ಸ್ಥಳೀಯರು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ತಿಳಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಚಿರತೆ ರಕ್ಷಿಸುವ ಕಾರ್ಯ ಕೈಗೊಂಡರು. ಚಿರತೆಗೆ ಪ್ರಜ್ಞೆ ತಪ್ಪಿಸುವ ಚುಚ್ಚುಮದ್ದು ನೀಡಿ ಸೆರೆ ಹಿಡಿದು ಅರಣ್ಯಗೆ ಕೊಂಡೊಯ್ದರು. ಚಿರತೆ ಹಿಡಿದ ಬಳಿಕ ಆ ಭಾಗದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಇನ್ನು ಬಾಲಕ ಚಿರತೆ ಎದುರು ಧೈರ್ಯ ತೋರಿದ ಪ್ರಸಂಗವೆಲ್ಲವೂ ಮನೆಯೊಳಗಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಮನೆಯೊಳಗೆ ಚಿರತೆ ನುಗ್ಗುತ್ತಿರುವ ದೃಶ್ಯ ಬಾಲಕ ಮೋಹಿತ್ ಹೇಳಿದ್ದೇನು?: ''ನಾನು ಮೊಬೈಲ್ಗೆ ಚಾರ್ಜ್ ಹಾಕಿ ಗೇಮ್ ಆಡುತ್ತಿದ್ದೆ. ಈ ವೇಳೆ ಚಿರತೆ ಮೆಲ್ಲನೆ ಮನೆಯೊಳಗೆ ನುಗ್ಗಿತು. ನಾನು ಕೂಡಲೇ ಮೊಬೈಲ್ ಅನ್ನು ಎತ್ತಿಕೊಂದು ಮನೆಯ ಬಾಗಿಲನ್ನು ಹಾಕಿ ಹೊರಗೆ ಓಡಿ ಬಂದೆ. ಆ ಸಮಯದಲ್ಲಿ ನಮ್ಮ ತಂದೆ ಹೊರಗೆ ಹೋಗಿದ್ದರು. ಬಳಿಕ ಅವರು ಬಂದರು. ಬಂದಾಕ್ಷಣ ನಾನು ಈ ವಿಷಯವನ್ನು ಅವರಿಗೆ ತಿಳಿಸಿದೆ'' ಎಂದು ಬಾಲಕ ಮೋಹಿತ್ ನಡೆದ ಘಟನೆ ಬಗ್ಗೆ ವಿವರಿಸಿದ್ದಾನೆ.
ಧೈರ್ಯ ತೋರಿರುವ ಬಾಲಕ ಮೋಹಿತ್ ವಿಜಯ್ ಅಹಿರೆ ಚಿತ್ರ ಚಿರತೆಗಳ ತಾಣ:ನಾಸಿಕ್ ಜಿಲ್ಲೆಯ ಸಿನ್ನಾರ್, ನಿಫಾಡ್, ಇಗತ್‌ಪುರಿ, ಮಾಲೇಗಾಂವ್, ಚಂದವಾಡ, ತ್ರಯಂಬಕೇಶ್ವರ ತಾಲೂಕುಗಳು ಸದ್ಯ ಚಿರತೆಗಳ ತಾಣಗಳಾಗಿ ಮಾರ್ಪಟ್ಟಿವೆ. ಈ ತಾಲ್ಲೂಕಿನಲ್ಲಿ ಗೋದಾವರಿ, ಡರ್ನಾ ಮತ್ತು ಕಡವ ನದಿಗಳು ಹರಿಯುತ್ತವೆ. ಈ ನದಿಗಳ ಸುತ್ತಲೂ ಕಬ್ಬಿನ ಗದ್ದೆಗಳಿವೆ. ಕಬ್ಬಿನ ಗದ್ದೆಗಳು ಚಿರತೆಗಳು ಅಡಗಿ ಕೂರಲು ಸುರಕ್ಷಿತ ಸ್ಥಳವಾಗಿರುವುದರಿಂದ ಅವುಗಳ ಕಾಟ ಹೆಚ್ಚಿದೆ. ಇದರೊಂದಿಗೆ ಗ್ರಾಮದಲ್ಲಿ ಮೇಕೆ, ಕುರಿ, ಬೀದಿನಾಯಿಗಳು ಆಹಾರವಾಗಿ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ.
ಜಾಗೃತಿ ಹೇಗೆ:ನಾಸಿಕ್ ಜಿಲ್ಲೆಯಲ್ಲಿ ಕಬ್ಬಿನ ಪ್ರದೇಶ ಹೆಚ್ಚಿರುವುದರಿಂದ ಚಿರತೆಗಳು ಅಡಗಿಕೊಳ್ಳಲು ಸೂಕ್ತ ಸ್ಥಳವಾಗಿದೆ. ಕಬ್ಬು ಕಡಿಯುವಾಗ ಚಿರತೆ ದಾಳಿಗೆ ತುತ್ತಾಗುತ್ತಿರುವುದು ಕಂಡು ಬಂದಿದೆ. ಹಾಗಾಗಿ ರೈತರು ಮತ್ತು ಕೂಲಿಕಾರರು ಸಹ ಜಾಗೃತಿ ವಹಿಸಬೇಕು. ಕಬ್ಬು ಕಡಿಯುತ್ತಿದ್ದರೆ ಬದಿಯಲ್ಲಿ ಬೆಂಕಿ ಇಡಬೇಕು. ಹಾಗಾಗಿ ಚಿರತೆ, ತೋಳ ಸೇರಿದಂತೆ ಕಾಡುಪ್ರಾಣಿಗಳು ಹತ್ತಿರ ಸುಳಿಯುವುದಿಲ್ಲ. ಚಿರತೆಗಳು ಹಲವು ಬಾರಿ ಮಕ್ಕಳ ಮೇಲೆ ದಾಳಿ ನಡೆಸುತ್ತಿರುವುದು ಕಂಡು ಬಂದಿದೆ. ಕೆಲಸ ಮಾಡುವಾಗ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಪಾಲಕರಲ್ಲಿ ಅರಣ್ಯ ಇಲಾಖೆ ಮನವಿ ಮಾಡಿದೆ.
ಓದಿ:ನೀರಿನ ಪಾತ್ರೆಯೊಳಗೆ ಸಿಲುಕಿದ ತಲೆ, ಒದ್ದಾಡಿದ ಚಿರತೆ: 5 ಗಂಟೆಗಳ ಪ್ರಯತ್ನದ ಬಳಿಕ ರಕ್ಷಣೆ