ಮಸ್ಸೂರಿ (ಉತ್ತರಾಖಂಡ):ಮಸ್ಸೂರಿ- ಡೆಹ್ರಾಡೂನ್ ರಸ್ತೆಯ ಜರಿಪಾನಿ ರಸ್ತೆಯ ವಾಟರ್ ಬ್ಯಾಂಡ್ ಬಳಿ ಕಾರೊಂದು ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಜನ ಸಾವನ್ನಪ್ಪಿದ್ದಾರೆ. ಮೃತರಲ್ಲಿ ನಾಲ್ವರು ವಿದ್ಯಾರ್ಥಿಗಳು ಹಾಗೂ ಇಬ್ಬರು ವಿದ್ಯಾರ್ಥಿನಿಯರು ಸೇರಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಬಂದ ತಕ್ಷಣ ಮಸ್ಸೂರಿ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಪ್ರಾರಂಭಿಸಿದವು.
ಗಾಯಗೊಂಡ ವಿದ್ಯಾರ್ಥಿನಿ, ಚಿಕಿತ್ಸೆ ಫಲಕಾರಿಯಾಗದೇ ಸಾವು:ಕಾರಿನಲ್ಲಿ ಸಿಲುಕಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ಕಂದಕದಿಂದ ರಕ್ಷಿಸಿ 108 ಆಂಬ್ಯುಲೆನ್ಸ್ ಮೂಲಕ ಡೆಹ್ರಾಡೂನ್ ಹೈಯರ್ ಸೆಂಟರ್‌ಗೆ ಕಳುಹಿಸಲಾಯಿತು. ಆದರೆ, ಅವರಲ್ಲಿ ಒಬ್ಬ ವಿದ್ಯಾರ್ಥಿನಿ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ವಿದ್ಯಾರ್ಥಿನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವಳೂ ಸಾವನ್ನಪ್ಪಿದ್ದಾಳೆ. ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದರು.
ಅವರ ಮೃತದೇಹಗಳನ್ನು ಹೊರತೆಗೆದು ಮಸ್ಸೂರಿ ಉಪ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಡೆಹ್ರಾಡೂನ್ ಐಎಂಎಸ್ ಕಾಲೇಜಿನಲ್ಲಿ ನಾಲ್ವರು ಯುವಕರು ಮತ್ತು ಇಬ್ಬರು ಹುಡುಗಿಯರು ವಿದ್ಯಾಭ್ಯಾಸ ಮಾಡುತ್ತಿದ್ದರು. ಇವರೆಲ್ಲರೂ ಮಸ್ಸೂರಿಗೆ ಬಂದಿದ್ದರು. ಬೆಳಗ್ಗೆ ಡೆಹ್ರಾಡೂನ್‌ಗೆ ಹಿಂತಿರುಗುತ್ತಿದ್ದಾಗ, ಅವರ ಕಾರು ಚುನಾಖಾನ್ ಬಳಿ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿಬಿದ್ದಿದೆ.