ಕರ್ನಾಟಕ

karnataka

By ETV Bharat Karnataka Team

Published : 4 hours ago

ETV Bharat / bharat

ಮಣಿಪುರದ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ: ಹೈ ಅಲರ್ಟ್ ಘೋಷಣೆ - Tension in various Manipur

ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ, ವಿವಿಧ ಜಿಲ್ಲೆಗಳಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ತಲೆದೋರಿದ್ದು, 16 ಜಿಲ್ಲೆಗಳ ಎಸ್​ಪಿಗಳಿಗೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅಲ್ಲಿನ ಗೃಹ ಇಲಾಖೆ ಸೂಚನೆ ನೀಡಿದೆ.

Tension in various Manipur districts, high alert sounded
ಮಣಿಪುರದ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ: ಹೈ ಅಲರ್ಟ್ ಘೋಷಣೆ (IANS)

ಇಂಫಾಲ್: ಮಣಿಪುರದ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಉದ್ವಿಗ್ನತೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜಾಗರೂಕರಾಗಿರಲು ಎಲ್ಲ 16 ಜಿಲ್ಲಾ ಪೊಲೀಸ್ ವರಿಷ್ಠರಿಗೆ ಗೃಹ ಇಲಾಖೆ ಸೂಚಿಸಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದ ಉಖ್ರುಲ್ ಜಿಲ್ಲೆಯಲ್ಲಿ ಬುಧವಾರ ಎರಡು ನಾಗಾ ಗ್ರಾಮಗಳ ನಿವಾಸಿಗಳ ನಡುವೆ ಘರ್ಷಣೆ ನಡೆದಿದೆ. ಎರಡು ಗ್ರಾಮಗಳ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗುಂಡಿನ ಕಾಳಗದಲ್ಲಿ ಮಣಿಪುರ ರೈಫಲ್ಸ್ ಸೈನಿಕ ಸೇರಿದಂತೆ ಮೂವರು ಮೃತಪಟ್ಟು, 30 ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ವರದಿಯಾದ ಬಳಿಕ ಮಣಿಪುರ ಪೊಲೀಸರು ಎಲ್ಲಾ 16 ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗೆ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ.

ಕಾನೂನು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ -ಎಡಿಜಿ ಎಲ್. ಕೈಲುನ್ ಹೊರಡಿಸಿರುವ ತುರ್ತು ಸಂದೇಶದಲ್ಲಿ ಎಲ್ಲಾ 16 ಜಿಲ್ಲಾ ಎಸ್‌ಪಿಗಳಿಗೆ ಚಾಲ್ತಿಯಲ್ಲಿರುವ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳಿಗೆ ಸರಿಯಾದ ಭದ್ರತೆ ಖಚಿತಪಡಿಸಿಕೊಳ್ಳಬೇಕು. ಎಲ್ಲ ಅಧಿಕಾರಿಗಳು, ಪೊಲೀಸ್ ಠಾಣೆಗಳು, ಔಟ್‌ಪೋಸ್ಟ್‌ಗಳು ಮತ್ತು ನಾಕಾ ಪಾಯಿಂಟ್‌ಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಬೇಕು ಎಂದು ಎಡಿಜಿ ತಮ್ಮ ತುರ್ತು ಸಂದೇಶದಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ:ಜಾರ್ಖಂಡ್​ನಲ್ಲಿ ರೈಲು ಹಳಿ ಸ್ಫೋಟಿಸಿದ ದುಷ್ಕರ್ಮಿಗಳು: ಯಾರದೀ ಕೈವಾಡ? - Explosion on railway track

ಶಾಂತಿ ಕಾಪಾಡುವಂತೆ ಸಿಎಂ ಮನವಿ: ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಮೂವರು ನಾಗಾಗಳ ಸಾವಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಜನರು ಶಾಂತವಾಗಿರುವಂತೆ ಮನವಿ ಮಾಡಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚನೆ ಕೂಡಾ ಕೊಟ್ಟಿದ್ದಾರೆ.

ಎಲ್ಲಾ ಗಾಯಾಳುಗಳಿಗೆ ಇಂಫಾಲ್ ಮತ್ತು ಉಖ್ರುಲ್‌ನಲ್ಲಿ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಲು ಸರ್ಕಾರದಿಂದ ಸಹಾಯ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬುಧವಾರ ರಾತ್ರಿ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೇಟಿ ಸಮುದಾಯಕ್ಕೆ ಸೇರಿದ ಇಬ್ಬರು ಯುವಕರ ಅಪಹರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 27 ರಿಂದ ಕಣಿವೆಯ ಆರು ಜಿಲ್ಲೆಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಈ ಜಿಲ್ಲೆಗಳಲ್ಲಿ ಪೊಲೀಸರು ಈಗಲೂ ಸಹ ಕಟ್ಟೆಚ್ಚರ ವಹಿಸಿದ್ದಾರೆ.

ಏತನ್ಮಧ್ಯೆ, ಮಣಿಪುರದ ಚುರಾಚಂದ್‌ಪುರ ಜಿಲ್ಲೆಯ ಲೀಶಾಂಗ್ ಗ್ರಾಮದ ಬಳಿ ಮಂಗಳವಾರ ಅಪರಿಚಿತ ಬಂದೂಕುಧಾರಿಗಳು ನಿಷೇಧಿತ ಉಗ್ರಗಾಮಿ ಸಂಘಟನೆಯ ಸ್ವಯಂಘೋಷಿತ ಪಟ್ಟಣದ ಕಮಾಂಡರ್‌ನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹತ್ಯೆಗೀಡಾದ ಉಗ್ರಗಾಮಿಯನ್ನು ಸೆಖೋಹಾವೊ ಹಾಕಿಪ್ ಎಂದು ಗುರುತಿಸಲಾಗಿದೆ ಎಂದು ವರದಿಯಾಗಿದೆ.

ಇಬ್ಬರು ಯುವಕರ ಬಿಡುಗಡೆಗೆ ಒತ್ತಾಯಿಸಿ ಆರು ಜಿಲ್ಲೆಗಳ ಬಂದ್​ಗೆ ಕರೆ:ಇಬ್ಬರು ಯುವಕರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಬಂದ್‌ನಿಂದಾಗಿ ಮಣಿಪುರದ ಆರು ಕಣಿವೆ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಂಗಡಿಗಳು, ಮಾರುಕಟ್ಟೆಗಳು, ವಾಣಿಜ್ಯ ಸಂಸ್ಥೆಗಳು, ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್‌ಗಳು ಮುಚ್ಚಲ್ಪಟ್ಟಿವೆ ಮತ್ತು ಸ್ಥಗಿತದ ದೃಷ್ಟಿಯಿಂದ ಖಾಸಗಿ ವಾಹನಗಳು ರಸ್ತೆಯಿಂದ ಹೊರಗುಳಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂದ್​ ಬಗ್ಗೆ ಮಾತನಾಡಿರುವ ಜೆಎಸಿ ಸಂಚಾಲಕ ಎಲ್.ಸುಬೋಲ್, ಇಬ್ಬರು ಯುವಕರನ್ನು ಬಿಡುಗಡೆ ಮಾಡುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಯುವಕರನ್ನು ಬಿಡುಗಡೆ ಮಾಡುವಂತೆ ವಿವಿಧ ನಾಗರಿಕ ಸಂಘಟನೆಗಳು, ರಾಜಕೀಯ ಪಕ್ಷಗಳು ಮತ್ತು ಎನ್‌ಜಿಒಗಳು ರಾಜ್ಯ ಸರ್ಕಾರ ಮತ್ತು ಕುಕಿ ಹೋರಾಟಗಾರರನ್ನು ಒತ್ತಾಯಿಸುತ್ತಿವೆ.

ಘಟನೆಯ ಹಿನ್ನೆಲೆ;ತೌಬಲ್ ಜಿಲ್ಲೆಯ ನಿವಾಸಿಗಳಾದ ಮೂವರು ಯುವಕರು ಸೆಪ್ಟೆಂಬರ್ 27 ರಂದು ಇಂಫಾಲ್ ಪಶ್ಚಿಮ ಮತ್ತು ಕಾಂಗ್‌ಪೋಕ್ಪಿ ಜಿಲ್ಲೆಗಳ ನಡುವಿನ ನ್ಯೂ ಕೀಥೆಲ್‌ಮಂಬಿಯಲ್ಲಿ ಸೇನಾ ನೇಮಕಾತಿ ಪರೀಕ್ಷೆಗೆ ಹಾಜರಾಗಲು ತೆರಳುತ್ತಿದ್ದಾಗ ಶಸ್ತ್ರಸಜ್ಜಿತ ಕುಕಿ ಉಗ್ರಗಾಮಿಗಳು ಅವರನ್ನು ಅಪಹರಿಸಿದ್ದರು. ಅಪಹರಣಕ್ಕೊಳಗಾದ ಇಬ್ಬರು ಯುವಕರನ್ನು ಬಿಡುಗಡೆ ಮಾಡುವಂತೆ ಪೊಲೀಸ್ ಮಹಾನಿರ್ದೇಶಕ ರಾಜೀವ್ ಸಿಂಗ್ ಅವರನ್ನು ಕೇಳಿದ್ದೇನೆ ಎಂದು ಮಣಿಪುರ ಮುಖ್ಯಮಂತ್ರಿ ಈ ಹಿಂದೆ ಹೇಳಿದ್ದರು.

ಇಬ್ಬರು ಯುವಕರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ಕೇಂದ್ರ ಮತ್ತು ರಾಜ್ಯ ಭದ್ರತಾ ಪಡೆಗಳು ತಮ್ಮ ಪ್ರಯತ್ನವನ್ನು ಮುಂದುವರೆಸಿವೆ, ಡಿಜಿಪಿ ಅವರೇ ಸ್ಥಳಕ್ಕೆ ತೆರಳಿ ಅಪಹರಣಕಾರರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ. ಸಕಾರಾತ್ಮಕ ಫಲಿತಾಂಶ ಬರುತ್ತೆ ಎಂದು ನಾವು ಭಾವಿಸುತ್ತೇವೆ. ಅಪಹರಣಕಾರರು ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ, ಆದರೆ ನಾವು ಇಬ್ಬರು ಯುವಕರನ್ನು ಬೇಷರತ್ತಾಗಿ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಮಾಧ್ಯಮಗಳಿಗೆ ಈ ಹಿಂದೆಯೇ ಮಾಹಿತಿ ನೀಡಿದ್ದರು.

ಇದನ್ನು ಓದಿ:ಇಸ್ರೇಲ್​ ಮೇಲೆ ಇರಾನ್​ನಿಂದ 200ಕ್ಕೂ ಅಧಿಕ ಕ್ಷಿಪಣಿ ದಾಳಿ - Iran Missile Attack On Israel

ABOUT THE AUTHOR

...view details