ಬುಲಂದ್‌ಶಹರ್ (ಉತ್ತರ ಪ್ರದೇಶ):ಉತ್ತರ ಪ್ರದೇಶದ ಬುಲಂದ್ಶಹರ್ನ ಸೇಲಂಪುರ ಎಂಬಲ್ಲಿ ಭಾನುವಾರ ಖಾಸಗಿ ಬಸ್ ಮತ್ತು ಪಿಕಪ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಪಿಕಪ್‌ನಲ್ಲಿ ಸುಮಾರು 25 ಜನರಿದ್ದರು ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಗಾಯಗೊಂಡವರ ಕಿರುಚಾಟ ಕೇಳಿ ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ.
ಪಿಕಪ್ ವಾಹನವು ಗಾಜಿಯಾಬಾದ್ ಕಡೆಯಿಂದ ಬರುತ್ತಿರುವಾಗ ಅವಘಡ ಸಂಭವಿಸಿದೆ. ಖಾಸಗಿ ಬಸ್ ಚಾಲಕ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ಗೆ ಡಿಕ್ಕಿ ಹೊಡೆದಿದೆ. ಪಿಕಪ್ ಚಾಲಕ ಮಾರ್ಗ ಬದಲಿಸಲು ಸಿಗ್ನಲ್ ಹಾಕಿದ್ದರೂ ಕೂಡ ಗಮನಿಸದ ಚಾಲಕ ಬಸ್ ಡಿಕ್ಕಿ ಹೊಡೆಸಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.