ನಾಗರ್ಕುರ್ನೂಲ್ (ತೆಲಂಗಾಣ): ತ್ರೀ-ಇನ್-ಒನ್ ಹೈಬ್ರಿಡ್ ಸೈಕಲ್ ಅನ್ನು ವಿನ್ಯಾಸಗೊಳಿಸಿರುವ ನಾಗರಕುರ್ನೂಲ್ ಜಿಲ್ಲೆಯ ನಲ್ಲಮಲ ಪ್ರದೇಶದ 9ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಸಿಎಂ ರೇವಂತ್ ರೆಡ್ಡಿ ಅವರು ಶ್ಲಾಘಿಸಿದ್ದಾರೆ. ಬಲ್ಮೂರ್ ಮಂಡಲದ ಜಿಲ್ಲಾ ಪಂಚಾಯಿತಿ ಪ್ರೌಢಶಾಲೆಯ ಗಗನ್ ಚಂದ್ರ ಪ್ರಶಂಸೆಗೆ ಪಾತ್ರರಾದ ವಿದ್ಯಾರ್ಥಿ.
ಬಾಲ್ಯದಿಂದಲೂ ಕಾಡುತ್ತಿದ್ದ ತನ್ನ ಅನಾರೋಗ್ಯವನ್ನು ಲೆಕ್ಕಿಸಿದೇ ಅತ್ಯಾಧುನಿಕ ತ್ರೀ-ಇನ್-ಒನ್ ಹೈಬ್ರಿಡ್ ಸೈಕಲ್ ವಿನ್ಯಾಸಗೊಳಿಸುವ ಮೂಲಕ ಗಗನ್ ಚಂದ್ರ ಗಮನ ಸೆಳೆದಿದ್ದಾನೆ. ಜನವರಿ 20 ರಿಂದ 25 ರವರೆಗೆ ಪುದುಚೇರಿಯಲ್ಲಿ ನಡೆದ ದಕ್ಷಿಣ ಭಾರತದ ಮಟ್ಟದ ಮಕ್ಕಳ ವಿಜ್ಞಾನ ಪ್ರದರ್ಶನದಲ್ಲಿ ಈ ವಿದ್ಯಾರ್ಥಿ ಮಾಡಿದ ಆವಿಷ್ಕಾರ ಮೂರನೇ ಸ್ಥಾನ ಪಡೆದಿದ್ದಲ್ಲದೇ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೂ ಆಯ್ಕೆಯಾಗಿದೆ.
ಬಾಲ್ಯದಿಂದಲೂ ಆರೋಗ್ಯ ಸಮಸ್ಯೆ:ವಿದ್ಯಾರ್ಥಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ರೇವಂತ್ ರೆಡ್ಡಿ, ವಿದ್ಯಾರ್ಥಿ ಗಗನ್ ಚಂದ್ರ ಅವರನ್ನು ಅಭಿನಂದಿಸಿದ್ದಾರೆ. ನಾಗರಕುರ್ನೂಲ್ ಜಿಲ್ಲೆಯ ಮಚಿನಪಲ್ಲಿಯ ಸುವರ್ಣ ಮತ್ತು ಭಾಸ್ಕರ್ ದಂಪತಿಯ ಪುತ್ರನಾಗಿರುವ ಗಗನ್ ಚಂದ್ರನಿಗೆ ಜನಿಸಿದ ಕೆಲವು ದಿನಗಳಲ್ಲೇ ನ್ಯುಮೋನಿಯಾ ಅಪ್ಪಳಿಸಿತ್ತು. ಸುಮಾರು ಏಳು ವರ್ಷಗಳ ಕಾಲ ನ್ಯುಮೋನಿಯಾದ ವಿರುದ್ಧ ಹೋರಾಡುತ್ತಲೇ ಬಂದಿದ್ದನು. ಈ ಅನಾರೋಗ್ಯದ ಸಮಸ್ಯೆಯ ಹೊರತು ತನ್ನ ಆವಿಷ್ಕಾರವನ್ನು ಮುಂದುವರೆಸಿದ್ದನು. ಬಲ್ಮೂರ್ ಮಂಡಲದ ಜಿಲ್ಲಾ ಪಂಚಾಯಿತಿ ಪ್ರೌಢಶಾಲೆಯ ವಿದ್ಯಾರ್ಥಿಯೂ ಆಗಿರುವ ಗಗನ್ ಚಂದ್ರ, ಸಾಮಾನ್ಯ ಸೈಕಲ್‌ನಂತೆ ಪೆಡಲ್ ಮಾಡಬಹುದಾದ, ಸೌರಶಕ್ತಿಯಿಂದ ಚಾಲಿಸಬಲ್ಲ ಜೊತೆಗೆ ವಿದ್ಯುತ್ ಚಾರ್ಜ್ ಮಾಡಬಹುದಾದ ವಿಶಿಷ್ಟ ಸೈಕಲ್ ವಿನ್ಯಾಸಗೊಳಿಸಿ ಇದೀಗ ಸೈ ಅನ್ನಿಸಿಕೊಂಡಿದ್ದಾನೆ.