ಚೆನ್ನೈ, ತಮಿಳುನಾಡು: ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 5,845 ಶಿಕ್ಷಕರನ್ನು ಮೂರು ವರ್ಷಗಳ ಕಾಲ ಸರ್ಕಾರಿ ಶಾಲೆಗಳಿಗೆ ವರ್ಗಾವಣೆ ಮಾಡಿ ತಮಿಳುನಾಡು ಶಾಲಾ ಶಿಕ್ಷಣ ಇಲಾಖೆ ತುರ್ತು ಆದೇಶ ಹೊರಡಿಸಿದೆ. ಅಲ್ಲದೇ, ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾದಾಗ ಸರ್ಕಾರಿ ಶಾಲೆಗೆ ನೇಮಕಗೊಂಡಿರುವ ಶಿಕ್ಷರನ್ನು ಮತ್ತೆ ಸರ್ಕಾರಿ ಅನುದಾನಿತ ಶಾಲೆಗಳಿಗೆ ಮರಳಲು ಅವಕಾಶ ಕಲ್ಪಿಸಿ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ವರ್ಗಾವಣೆ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ತಮಿಳುನಾಡಿನ ಸರ್ಕಾರಿ ಪ್ರಾಥಮಿಕ, ಮಧ್ಯಮ ಮತ್ತು ಪ್ರೌಢಶಾಲೆಗಳಲ್ಲಿ ಸುಮಾರು 14,000 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 800ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಆಯ್ಕೆ ಮಂಡಳಿಯ ಮೂಲಕ 10,700 ಪ್ರೌಢ ಶಿಕ್ಷಕರನ್ನು ನೇಮಿಸಲಾಗುತ್ತದೆ.
ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಮಾರ್ಚ್ 1ರಿಂದ ಸರಕಾರಿ ಶಾಲೆಗಳಲ್ಲಿ ದಾಖಲಾತಿ ನಡೆಸಲಾಗಿದ್ದು, ಪ್ರಸ್ತುತ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 3 ಲಕ್ಷ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಆದರೆ ಸರಕಾರಿ ಶಾಲೆಗಳಲ್ಲಿ ಹೆಚ್ಚಿನ ಶಿಕ್ಷಕರಿಲ್ಲದೇ ಹುದ್ದೆಗಳು ಖಾಲಿ ಆಗಿವೆ. ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಈಗಾಗಲೇ ನೇಮಕಗೊಂಡ ಶಿಕ್ಷಕರು ದಾಖಲಾತಿ ಇಲ್ಲದೆ ಹೆಚ್ಚುವರಿಯಾಗಿ ಕೆಲಸ ಮಾಡುತ್ತಿದ್ದಾರೆ.
ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಕುಮಾರಗುರುಪರನ್ ಮಾತನಾಡಿ, "ಪ್ರಾಥಮಿಕ ಶಿಕ್ಷಣ ನಿರ್ದೇಶನಾಲಯದಡಿ 5,018 ಪ್ರಾಥಮಿಕ ಶಾಲೆಗಳು ಹಾಗೂ 1,496 ಮಧ್ಯಮ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಶಾಲೆಗಳಲ್ಲಿ ಆಗಸ್ಟ್ 1ರ ವರೆಗಿನ ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಗಣಿಸಿ ಬಳಿಕ ಶಿಕ್ಷಕರ ನೇಮಕದ ಬಗ್ಗೆ ಜಿಲ್ಲಾ ಶಿಕ್ಷಣಾಧಿಕಾರಿಗಳು (ಪ್ರಾಥಮಿಕ ಶಿಕ್ಷಣ) ನಿರ್ಧಾರ ಮಾಡಲಿದ್ದಾರೆ. ಅದರ ಆಧಾರದ ಮೇಲೆ ಸರ್ಕಾರವು ಪ್ರತಿ ವರ್ಷ ಶಾಲೆಗಳಿಗೆ ಬೋಧನೆ ಮತ್ತು ನಿರ್ವಹಣೆಗೆ ಅನುದಾನವನ್ನು ಮಂಜೂರು ಮಾಡಲಿದೆ.