ಕರ್ನಾಟಕ

karnataka

ETV Bharat / bharat

ನವ ದಂಪತಿ ಏಕೆ 16 ಮಕ್ಕಳನ್ನು ಹೊಂದಬಾರದು?: ತಮಿಳುನಾಡು ಸಿಎಂ ಸ್ಟಾಲಿನ್​

ದಕ್ಷಿಣ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್​ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಅನುದಾನ ಮತ್ತು ಸಂಸತ್​ ಸ್ಥಾನಗಳ ಹಂಚಿಕೆಯಲ್ಲಿ ಅನ್ಯಾಯವಾಗಲಿದೆ ಎಂದು ಹೇಳಿದ್ದಾರೆ.

ತಮಿಳುನಾಡು ಸಿಎಂ ಸ್ಟಾಲಿನ್​
ತಮಿಳುನಾಡು ಸಿಎಂ ಸ್ಟಾಲಿನ್​ (ETV Bharat)

By ETV Bharat Karnataka Team

Published : 10 hours ago

ಚೆನ್ನೈ(ತಮಿಳುನಾಡು):ದಕ್ಷಿಣ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣದಲ್ಲಿದ್ದು, ಸಂಸತ್​ ಸ್ಥಾನಗಳಲ್ಲಿ ಕುಸಿತ ಉಂಟಾಗುವ ಸಾಧ್ಯತೆಗಳಿವೆ. ಜನಸಂಖ್ಯಾ ಗಣತಿ ನಡೆದಲ್ಲಿ ಸಂಸತ್ತಿನಲ್ಲಿ ಈ ರಾಜ್ಯಗಳ ಪ್ರಾತಿನಿಧ್ಯ ಸಹಜವಾಗಿ ಕಡಿಮೆಯಾಗಲಿದೆ. ಹೀಗಾಗಿ, ಜನಸಂಖ್ಯೆ ಹೆಚ್ಚಿಸುವ ಬಗ್ಗೆ ಜನರು ಯೋಚಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​​ ನೀಡಿರುವ ಹೇಳಿಕೆ ಕುತೂಹಲ ಮೂಡಿಸಿದೆ.

ಸ್ಟಾಲಿನ್ ಜನಸಂಖ್ಯೆ ನಿಯಂತ್ರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಲ್ಲದೇ, ಓರ್ವ ದಂಪತಿ 16 ಮಕ್ಕಳನ್ನು ಹೊಂದುವ ಆಲೋಚನೆ ಏಕೆ ಇರಬಾರದು ಎಂದೂ ಪ್ರಶ್ನಿಸಿದ್ದಾರೆ.

ತಿರುವನ್ಮಿಯೂರಿನ ಮಾರುಂಡೀಶ್ವರ ದೇವಸ್ಥಾನದಲ್ಲಿ ಇಂದು ಆಯೋಜಿಸಿದ್ದ 31 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸಿಎಂ ಸ್ಟಾಲಿನ್ ಭಾಗವಹಿಸಿದ್ದರು. ಈ ವೇಳೆ ಮಾತನಾಡಿರುವ ಅವರು, ಹಿಂದಿನ ಕಾಲದಲ್ಲಿ ಹಿರಿಯರು ಹೊಸದಾಗಿ ಮದುವೆಯಾದ ದಂಪತಿಗೆ 16 ಬಗೆಯ ಆಸ್ತಿ ಸಿಗುವಂತೆ ಆಶೀರ್ವದಿಸುತ್ತಿದ್ದರು. ಈಗ, ಆಸ್ತಿ ಬದಲು 16 ಮಕ್ಕಳನ್ನು ಪಡೆದು ಸುಖದಿಂದ ಬಾಳುವಂತೆ ಅನುಗ್ರಹಿಸಿ. ಜನಸಂಖ್ಯೆ ನಿಯಂತ್ರಣದಿಂದಾಗಿ ಸಂಸತ್​ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದಕ್ಕೆ ತಕ್ಕಂತೆ ಪರಿಸ್ಥಿತಿಗಳು ಬದಲಾಗಬೇಕು. 16 ಮಕ್ಕಳನ್ನು ಹೊಂದುವ ಆಲೋಚನೆ ಎಲ್ಲರಿಗೂ ಏಕೆ ಇರಬಾರದು ಎಂಬ ಪ್ರಶ್ನೆ ಹರಿಬಿಟ್ಟಿದ್ದಾರೆ.

ಅನ್ಯಾಯ ತಡೆಗೆ ನಿಯಮ ರೂಪಿಸಿ:ಮತ್ತೊಂದೆಡೆ, ಕುಟುಂಬ ಯೋಜನೆ ಜಾರಿಯಲ್ಲಿ ಯಶಸ್ವಿಯಾಗಿರುವ ದಕ್ಷಿಣ ರಾಜ್ಯಗಳಿಗೆ ಈ ಕ್ರಮವೇ ನಷ್ಟವನ್ನುಂಟು ಮಾಡಿದೆ. ಲೋಕಸಭೆಯ ಸೀಟು ಹಂಚಿಕೆಗೆ ಜನಗಣತಿಯನ್ನು ಬಳಸಿದಲ್ಲಿ, ಸಹಜವಾಗಿ ಸೀಟು ಹಂಚಿಕೆ ಕಡಿಮೆಯಾಗಲಿದೆ. ಈ ಅನ್ಯಾಯ ತಡೆಗೆ ಸೂಕ್ತ ನಿಯಮ ರೂಪಿಸಬೇಕಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ಕುಟುಂಬ ಯೋಜನೆ ಜಾರಿಗೊಳಿಸುವಲ್ಲಿ ದಕ್ಷಿಣ ರಾಜ್ಯಗಳು ಮುಂದಿವೆ. 1988ರಲ್ಲಿ ಕೇರಳ, 1993ರಲ್ಲಿ ತಮಿಳುನಾಡು, 2001ರಲ್ಲಿ ಆಂಧ್ರ ಪ್ರದೇಶ ಮತ್ತು 2005ರಲ್ಲಿ ಕರ್ನಾಟಕ ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸಿದ್ದವು. ಈ ಕ್ರಮವೇ ಸಂಸತ್ತಿನಲ್ಲಿ ಪ್ರಾತಿನಿಧ್ಯವನ್ನು ಕಡಿಮೆ ಮಾಡುತ್ತದೆ ಎಂಬ ಆತಂಕವೂ ಇದೆ ಎಂದಿದ್ದಾರೆ.

2001ರಲ್ಲಿ, ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಸರ್ಕಾರವು 84ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿತು. ಅದರಂತೆ, 2026ರವರೆಗೆ ಲೋಕಸಭೆ ಸದಸ್ಯರ ಸಂಖ್ಯೆಯನ್ನು ಬದಲಾಯಿಸಬಾರದು ಎಂದು ಷರತ್ತು ವಿಧಿಸಿತ್ತು. ಜೊತೆಗೆ ಜನಗಣತಿಯ ಬಳಿಕ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಲಾಗುತ್ತದೆ. 2021ರ ಜನಗಣತಿಯನ್ನು ಇನ್ನೂ ನಡೆಸಲಾಗಿಲ್ಲ. ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಇದನ್ನು ಲೋಕಸಭೆ ಸ್ಥಾನಗಳ ಹಂಚಿಕೆಯಲ್ಲಿ ಬಳಸುತ್ತಾರೋ ಇಲ್ಲವೋ ನೋಡಬೇಕು ಎಂದು ಜೈರಾಮ್​ ರಮೇಶ್ ಹೇಳಿದರು.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಹರಿದ 'ಹಣದ ಹೊಳೆ': ನೀರಿನಲ್ಲಿ ತೇಲಿಬಂತು ಐನೂರರ ₹2 ಲಕ್ಷ ಮೊತ್ತದ ನೋಟುಗಳು!

ABOUT THE AUTHOR

...view details