ಚೆನ್ನೈ(ತಮಿಳುನಾಡು):ತಮಿಳುನಾಡಿನ ಕಲ್ಲಕುರಿಚಿ ಕಳ್ಳಭಟ್ಟಿ ದುರಂತ ಹಲವು ಕುಟುಂಬಗಳ ಬಾಳಿನಲ್ಲಿ ಕತ್ತಲು ಕವಿಯುವಂತೆ ಮಾಡಿದೆ. ಇದುವರೆಗೆ ಮಹಿಳೆಯರು ಸೇರಿ 58 ಜನ ಮೃತಪಟ್ಟಿದ್ದಾರೆ. 18 ವರ್ಷದೊಳಗಿನ 28 ಮಕ್ಕಳು ತಾಯಿ ಇಲ್ಲವೇ, ತಂದೆಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಕಲ್ಲಕುರಿಚಿ ಜಿಲ್ಲೆಯಲ್ಲಿ ಜೂನ್ 19ರಂದು ಕಳ್ಳಭಟ್ಟಿ ದುರಂತ ಸಂಭವಿಸಿತ್ತು. ದಿನ ದಿನಕ್ಕೆ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ತಂದೆ, ತಾಯಿಯನ್ನು ಕಳೆದುಕೊಂಡ ಮಕ್ಕಳ ಬಗ್ಗೆ ಮಕ್ಕಳ ಕಲ್ಯಾಣ ಮತ್ತು ವಿಶೇಷ ಸೇವಾ ಇಲಾಖೆ ಮಾಹಿತಿ ಕಲೆಹಾಕುತ್ತಿದೆ. ಇಲ್ಲಿಯವರೆಗೆ ಇಂತಹ 28 ಮಕ್ಕಳನ್ನು ಪತ್ತೆ ಮಾಡಲಾಗಿದೆ. ನಾಲ್ವರು ಮಕ್ಕಳು ತಾಯಿ, ತಂದೆ ಇಬ್ಬರನ್ನೂ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:ತಮಿಳುನಾಡು ಕಳ್ಳಭಟ್ಟಿ ದುರಂತ: ಇದುವರೆಗೆ 50 ಸಾವು, ಫೋಟೋ ಹಿಡಿದು ಪೋಷಕರಿಗಾಗಿ ಪುತ್ರಿಯ ಹುಡುಕಾಟ!
''ಈ ಮಕ್ಕಳು 18 ವರ್ಷದೊಳಗಿನವರು. ತಮ್ಮ ಶಿಕ್ಷಣವನ್ನು ಯಾವುದೇ ಅಡಚಣೆಯಿಲ್ಲದೆ ಮುಂದುವರಿಸಲು ಸೂಕ್ತ ಕ್ರಮಗಳನ್ನು ಸರ್ಕಾರದಿಂದ ತೆಗೆದುಕೊಳ್ಳಲಾಗುವುದು. ಅವರ ಇಚ್ಛೆಯನುಸಾರವೇ ಶಿಕ್ಷಣ ಕೊಡಿಸಲಾಗುವುದು. ಅಗತ್ಯವಾದರೆ ಖಾಸಗಿ ಶಾಲೆಗಳಿಗೂ ಸೇರಿಸಲಾಗುವುದು'' ಎಂದು ಜಿಲ್ಲಾಧಿಕಾರಿ ಪ್ರಶಾಂತ್ ತಿಳಿಸಿದ್ದಾರೆ.
ಮಾಸಿಕ 5,000 ರೂ. ನೆರವು:ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಕ್ಷಣದ ಪರಿಹಾರವಾಗಿ ಅವರ ಹೆಸರಿನಲ್ಲಿ ತಲಾ ಐದು ಲಕ್ಷ ರೂಪಾಯಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಠೇವಣಿಯಾಗಿ ಜಮೆ ಮಾಡಲಾಗುತ್ತದೆ. 18 ವರ್ಷ ಪೂರೈಸಿದ ನಂತರ ಮೊತ್ತವನ್ನು ಬಡ್ಡಿಯೊಂದಿಗೆ ಪಾವತಿಸಲಾಗುತ್ತದೆ. ಪ್ರತಿ ಮಗುವಿಗೂ 18 ವರ್ಷ ತುಂಬುವವರೆಗೆ ಮಾಸಿಕ 5,000 ರೂ.ಗಳನ್ನು ಆರೈಕೆ ನೆರವು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿರುವ ಸಿಎಂ, "ಇಬ್ಬರು ಅಥವಾ ಅವರ ಪೋಷಕರಲ್ಲಿ ಒಬ್ಬರನ್ನು ಕಳೆದುಕೊಂಡಿರುವ ಮಕ್ಕಳ ಪದವಿವರೆಗಿನ ಶಿಕ್ಷಣ ಶುಲ್ಕ, ಹಾಸ್ಟೆಲ್ ಶುಲ್ಕ ಸೇರಿದಂತೆ ಎಲ್ಲ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳಿಗೆ ಸರ್ಕಾರದ ಎಲ್ಲ ಕಲ್ಯಾಣ ಯೋಜನೆಗಳಲ್ಲಿ ಆದ್ಯತೆ ನೀಡಲಾಗುವುದು. ಸರ್ಕಾರಿ ಮನೆಗಳನ್ನು ಮಂಜೂರು ಮಾಡಲಾಗುವುದು" ಎಂದು ಪ್ರಕಟಿಸಿದ್ದಾರೆ.
ಸಂತ್ರಸ್ತರಲ್ಲಿ 40ಕ್ಕೂ ಹೆಚ್ಚು ಗ್ರಾಮಗಳ ಜನರು: ಕಲ್ಲಕುರಿಚಿ ಜಿಲ್ಲೆಯ ಕರುಣಾಪುರಂ ಪ್ರದೇಶದಲ್ಲಿ ನಡೆದ ಈ ಕಳ್ಳಭಟ್ಟಿ ದುರಂತದಲ್ಲಿ ಕೇವಲ ಈ ಪ್ರದೇಶದ ಜನರು ಮಾತ್ರವೇ ಇಲ್ಲ. ಮಾಧವಚೇರಿ, ಕೊಟ್ಟೈಮೇಡು, ಸಿರುವಂಗೂರು, ವಣ್ಣಂಜೂರು, ಶೇಷಸಮುತ್ರಂ, ಇಳಂತೈ, ಕಲ್ಲಕುರಿಚಿ ಪಟ್ಟಣ ಸೇರಿದಂತೆ 40ಕ್ಕೂ ಹೆಚ್ಚು ಗ್ರಾಮಗಳಿಗೂ ಸೇರಿದವರಾಗಿದ್ದಾರೆ. ಇನ್ನೂ 156 ಮಂದಿ ಕಲ್ಲಕುರಿಚಿ, ಸೇಲಂ, ವಿಲ್ಲುಪುರಂ ಮತ್ತು ಪಾಂಡಿಚೇರಿ ಜಿಪ್ಮರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ತಮಿಳುನಾಡು ನಕಲಿ ಮದ್ಯ ದುರಂತ: ಗಂಡಂದಿರನ್ನು ಕಳೆದುಕೊಂಡ 44 ಮಹಿಳೆಯರು!