ಕಟಕ್ (ಒಡಿಶಾ): ಬಾಡಿಗೆ ತಾಯ್ತನದ ಮೂಲಕ ತಾಯಂದಿರಾಗುವ ಮಹಿಳಾ ಉದ್ಯೋಗಿಗಳಿಗೆ ಸ್ವಾಭಾವಿಕ ಮತ್ತು ದತ್ತು ಪಡೆದ ತಾಯಂದಿರಿಗೆ ನೀಡಲಾಗಿರುವ ಹೆರಿಗೆ ರಜೆ ಮತ್ತು ಇತರ ಸೌಲಭ್ಯಗಳ ಸಮಾನ ಹಕ್ಕು ಇದೆ ಎಂದು ಒರಿಸ್ಸಾ ಹೈಕೋರ್ಟ್ ತೀರ್ಪು ನೀಡಿದೆ.
ಮಹಿಳಾ ಒಡಿಶಾ ಹಣಕಾಸು ಸೇವೆ (ಒಎಫ್ಎಸ್) ಅಧಿಕಾರಿ ಸುಪ್ರಿಯಾ ಜೆನಾ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಎಸ್.ಕೆ.ಪಾಣಿಗ್ರಾಹಿ ನೇತೃತ್ವದ ಏಕಸದಸ್ಯ ಪೀಠವು ಜೂನ್ 25ರಂದು ಈ ಆದೇಶ ನೀಡಿದೆ. ಬಾಡಿಗೆ ತಾಯ್ತನದ ಮೂಲಕ ಜೆನಾ ತಾಯಿಯಾಗಿದ್ದರು. ಆದರೆ, ಒಡಿಶಾ ಸರ್ಕಾರದಲ್ಲಿ ಉನ್ನತ ಅಧಿಕಾರಗಳು 180 ದಿನಗಳ ಹೆರಿಗೆ ರಜೆಯನ್ನು ನೀಡಲು ನಿರಾಕರಿಸಿದ್ದರು. ಆದ್ದರಿಂದ 2020ರಲ್ಲಿ ಸರ್ಕಾರದ ವಿರುದ್ಧ ಹೈಕೋರ್ಟ್‌ಗೆ ಸುಪ್ರಿಯಾ ಜೆನಾ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ವೇಳೆ, ದತ್ತು ಪಡೆದ ಮಗುವಿನ ಸರಿಯಾದ ಆರೈಕೆಗಾಗಿ ನೈಸರ್ಗಿಕ ತಾಯಂದಿರಿಗೆ ಸ್ವೀಕಾರಾರ್ಹವಾದ ಹೆರಿಗೆ ರಜೆಗೆ ಅನುಗುಣವಾಗಿ ಒಂದು ವರ್ಷದವರೆಗಿನ ಮಗುವನ್ನು ದತ್ತು ಪಡೆಯಲು ಮಹಿಳಾ ಸರ್ಕಾರಿ ನೌಕರರಿಗೆ 180 ದಿನಗಳ ರಜೆ ನೀಡಲಾಗುತ್ತದೆ ಎಂದು ನ್ಯಾಯಾಲಯವು ಗಮನಿಸಿದೆ. ಆದಾಗ್ಯೂ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಬೆಳೆಸುವ ಉದ್ದೇಶಕ್ಕಾಗಿ ಹೆರಿಗೆ ರಜೆಗೆ ಯಾವುದೇ ಅವಕಾಶವಿಲ್ಲ ಎಂದು ತಿಳಿಸಿದೆ.
ಸರ್ಕಾರವು ದತ್ತು ಪಡೆದ ತಾಯಿಗೆ ಹೆರಿಗೆ ರಜೆ ನೀಡಲು ಸಾಧ್ಯವಾದರೆ, ಅಂಡಾಣು ಅಥವಾ ವೀರ್ಯವನ್ನು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದ ತಾಯಿಗೆ ಹೆರಿಗೆ ರಜೆ ನೀಡಲು ನಿರಾಕರಿಸುವುದು ಸಂಪೂರ್ಣವಾಗಿ ಸೂಕ್ತವಲ್ಲ. ಬಾಡಿಗೆ ತಾಯ್ತನದ ಮೂಲಕ ತಾಯಂದಿರಾಗುವ ಉದ್ಯೋಗಿಗಳು ಹೇಗೆ ಪೋಷಕರಾಗುತ್ತಾರೆ ಎಂಬುದನ್ನು ಲೆಕ್ಕಿಸದೇ ಎಲ್ಲ ಹೊಸ ತಾಯಂದಿರಿಗೆ ಸಮಾನ ಚಿಕಿತ್ಸೆ ಮತ್ತು ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಹೆರಿಗೆ ರಜೆಯನ್ನು ನೀಡಬೇಕು ಎಂದು ಹೈಕೋರ್ಟ್ ತೀರ್ಪು ಕೊಟ್ಟಿದೆ.
ಈ ತಾಯಂದಿರಿಗೆ ಹೆರಿಗೆ ರಜೆ ನೀಡುವುದರಿಂದ ಅವರು ತಮ್ಮ ಮಗುವಿಗೆ ಸ್ಥಿರವಾದ ಮತ್ತು ಪ್ರೀತಿಯ ವಾತಾವರಣವನ್ನು ಸೃಷ್ಟಿಸಲು ಅಗತ್ಯವಾದ ಸಮಯವನ್ನು ಹೊಂದಿದ್ದಾರೆ ಎಂದು ಖಚಿತಪಡಿಸುತ್ತದೆ. ಅಲ್ಲದೇ, ತಾಯಿ ಮತ್ತು ಮಗುವಿನ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ. ಮೂರು ತಿಂಗಳೊಳಗೆ ಅರ್ಜಿದಾರರಿಗೆ 180 ದಿನಗಳ ಹೆರಿಗೆ ರಜೆಯನ್ನು ಮಂಜೂರು ಮಾಡುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನವನ್ನೂ ನೀಡಿದೆ.
ಬಾಡಿಗೆ ತಾಯ್ತನದಿಂದ ಜನಿಸಿದ ಮಗುವನ್ನು ಸ್ವಾಭಾವಿಕ ಪ್ರಕ್ರಿಯೆಯಿಂದ ಜನಿಸಿದ ಮಗುವಿನಂತೆ ಪರಿಗಣಿಸಲು ಮತ್ತು ನಿಯೋಜಿತ ತಾಯಿಗೆ ಒದಗಿಸುವ ನಿಯಮಗಳ ಸಂಬಂಧಿತ ನಿಬಂಧನೆಗಳಲ್ಲಿ ಈ ಅಂಶವನ್ನು ಅಳವಡಿಸಲು ಹಾಗೂ ಎಲ್ಲ ಪ್ರಯೋಜನಗಳನ್ನು ಒದಗಿಸಲು ಸಹ ರಾಜ್ಯದ ಸಂಬಂಧಿಸಿದ ಇಲಾಖೆಗೆ ಹೈಕೋರ್ಟ್ ಸೂಚಿಸಿದೆ.
ಇದನ್ನೂ ಓದಿ:'ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿ ಸಲ್ಲಿಸಲಾದ ಅರ್ಜಿಯನ್ನು ಪ್ರತಿವಾದಿಗಳ ವಾದ ಆಲಿಸದೇ ವಜಾಗೊಳಿಸುವಂತಿಲ್ಲ'