ನವದೆಹಲಿ:ಮಸೀದಿಯೊಳಗೆ 'ಜೈ ಶ್ರೀರಾಮ್' ಎಂದು ಕೂಗುವುದು ಒಂದು ಕೋಮಿನ ಧರ್ಮದ ಅವಹೇಳನ ಮತ್ತು ಹೇಗೆ ಅದು ಅಪರಾಧವಾಗುತ್ತದೆ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಅಲ್ಲದೇ, ಈ ಬಗ್ಗೆ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಲು ಸೋಮವಾರ ಒಪ್ಪಿಗೆ ನೀಡಿದೆ.
ಕರ್ನಾಟಕದ ಮಸೀದಿಯೊಂದರಲ್ಲಿ ಇಬ್ಬರು ವ್ಯಕ್ತಿಗಳು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದು ಅಪರಾಧ ಅಲ್ಲ ಎಂದು ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ಅರ್ಜಿಯು ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠದ ಮುಂದೆ ಬಂದಿತು. ಈ ವೇಳೆ ಪೀಠವು, 'ಘೋಷಣೆ ಕೂಗುವುದು ಅಪರಾಧ ಹೇಗಾಗುತ್ತದೆ' ಎಂದು ಪ್ರಶ್ನಿಸಿದರು.
"ಇದು ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ಅಪರಾಧ ಎಂದು ಹಿರಿಯ ವಕೀಲ ದೇವದತ್ ಕಾಮತ್ ಅವರು ಪ್ರತಿಪಾದಿಸಿದರು. ಇಂತಹ ಕೃತ್ಯಗಳಿಗೆ ಅನುಮತಿ ನೀಡಿದರೆ, ಸಮಾಜದಲ್ಲಿ ಅಶಾಂತಿ ಮೂಡಲಿದೆ. ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ 20 ದಿನಗಳಲ್ಲಿಯೇ ಹೈಕೋರ್ಟ್ ತನಿಖೆಯನ್ನು ರದ್ದು ಮಾಡಿದೆ" ಎಂದು ವಾದಿಸಿದರು.
ಈ ವೇಳೆ ಪೀಠವು, ಆರೋಪಿಗಳು ಧಾರ್ಮಿಕ ಘೋಷಣೆಯನ್ನು ಕೂಗಿದ್ದು ಅಪರಾಧವಲ್ಲ. ಇದು ಶಿಕ್ಷಿತ ಪರಿಧಿಗೆ ಬರುವುದಿಲ್ಲ ಎಂಬ ಹೈಕೋರ್ಟ್ ಆದೇಶವನ್ನು ಪೀಠವು ಗಮನಿಸಿತು. "ಘೋಷಣೆ ಕೂಗಿದವರ ವಿರುದ್ಧ ಯಾರು ದೂರು ದಾಖಲಿಸಿದ್ದಾರೆ. ಆರೋಪಿಗಳನ್ನು ಹೇಗೆ ಗುರುತಿಸಲಾಗಿದೆ" ಎಂದು ಪೀಠವು ಈ ವೇಳೆ ಪ್ರಶ್ನೆ ಮಾಡಿತು.
"ಆರೋಪಿಗಳು ಸಿಸಿಟಿವಿಯಲ್ಲಿ ಕಾಣಿಸಿಕೊಂಡಿದ್ದಾರೆ" ಎಂದು ಕಾಮತ್ ಅವರು ಪೀಠಕ್ಕೆ ತಿಳಿಸಿದರು. "ಮಸೀದಿಯಲ್ಲಿ ವ್ಯಕ್ತಿಗಳು ಕಂಡುಬಂದರೆ, ಅವರೇ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದರ್ಥವೇ" ಎಂದು ಪೀಠವು ಮರು ಪ್ರಶ್ನೆ ಮಾಡಿತು. ಬಳಿಕ ದೂರುದಾರ ಹೈದರ್ ಅಲಿ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು 2025 ರ ಜನವರಿಯಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿತು.
ಏನಿದು ಪ್ರಕರಣ?2024 ಸೆಪ್ಟೆಂಬರ್ 13 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮಸೀದಿಯ ಆವರಣಕ್ಕೆ ಪುತ್ತೂರಿನ ಕೀರ್ತನ್, ಮಂಗಳೂರಿನ ಸಚಿನ್ ನುಗ್ಗಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ ಎಂದು ಮಸೀದಿ ಸಿಬ್ಬಂದಿ ಪ್ರಕರಣ ದಾಖಲಿಸಿದ್ದರು. ತಮ್ಮ ವಿರುದ್ಧ ದಾಖಲಾದ ಕೇಸ್ ಅನ್ನು ರದ್ದು ಮಾಡಬೇಕು ಎಂದು ಕೋರಿ ಇಬ್ಬರೂ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದು ಹೇಗೆ ಅಪರಾಧವಾಗುತ್ತದೆ. ಧಾರ್ಮಿಕ ಭಾವನೆಗಳಿಗೆ ಹೇಗೆ ಧಕ್ಕೆ ತರುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ಪ್ರಕರಣದಲ್ಲಿ ಯಾವುದೇ ಅಪರಾಧವೂ ಕಂಡು ಬರುತ್ತಿಲ್ಲ. ಆರೋಪಿಗಳ ವಿರುದ್ಧ ಮುಂದಿನ ಪ್ರಕ್ರಿಯೆಗಳಿಗೆ ಅನುಮತಿ ನೀಡುವುದು ಕಾನೂನಿನ ದುರುಪಯೋಗವಾಗುತ್ತದೆ ಎಂದು ಹೇಳಿ ಪ್ರಕರಣವನ್ನು ರದ್ದು ಮಾಡಿತ್ತು.
ಇದನ್ನೂ ಓದಿ:ಆದಿವಾಸಿ ವ್ಯಕ್ತಿಯನ್ನು ಕಾರಿನಲ್ಲಿ ಸಿಕ್ಕಿಸಿಕೊಂಡು 500 ಮೀಟರ್ ಎಳೆದೊಯ್ದ ಪ್ರವಾಸಿಗರು!