ನವದೆಹಲಿ: ಉದ್ಯೋಗಕ್ಕಾಗಿ ಹಣ ಪಡೆದ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದಿಂದ ಬಂಧನಕ್ಕೊಳಗಾಗಿದ್ದ ತಮಿಳುನಾಡಿನ ಮಾಜಿ ಸಚಿವ ವಿ.ಸೆಂಥಿಲ್ ಬಾಲಾಜಿ ಅವರಿಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ನೀಡಿದೆ.
ನ್ಯಾ.ಅಭಯ್ ಎಸ್.ಒಕಾ ಮತ್ತು ನ್ಯಾ.ಆಗಸ್ಟಿನ್ ಜಾರ್ಜ್ ಮಾಸಿಹ್ ಅವರಿದ್ದ ದ್ವಿಸದಸ್ಯ ಪೀಠ ಸೆಂಥಿಲ್ ಅವರಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿತು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ವಕೀಲ ಜೊಹೆಬ್ ಹೊಸೈನ್ ಇಡಿ ಪರ ವಕಾಲತ್ತು ನಡೆಸಿದರೆ, ಹಿರಿಯ ವಕೀಲ ಮುಕುಲ್ ರೋಹಟಗಿ ಬಾಲಾಜಿ ಪರ ವಾದ ಮಂಡಿಸಿದರು.
"ಬಾಲಾಜಿ ಖಾತೆಯಲ್ಲಿ ಹಣ ಜಮೆಯಾಗಿದೆ ಎಂಬುದನ್ನು ಕೇಂದ್ರದ ತನಿಖಾ ಸಂಸ್ಥೆ ತೋರಿಸಿವೆ. ಈಗಾಗಲೇ ಅವರು ಒಂದು ವರ್ಷ ಸೆರೆವಾಸ ಅನುಭವಿಸಿದ್ದಾರೆ. ವಿಚಾರಣೆಯಲ್ಲಿನ ವಿಳಂಬ ಸಂಭವನೀಯ ಅಪಾಯ ಹೆಚ್ಚಿಸುವ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ನೀಡಬಾರದು" ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು.
ಇದಕ್ಕೆ ಪ್ರತಿವಾದ ಮಂಡಿಸಿದ ಮುಕುಲ್ ರೋಹಟಗಿ, "ಕೋರ್ಟ್ ಮೊದಲು ಜಾಮೀನು ನೀಡಬೇಕು. ಸೆಂಥಿಲ್ ಅವರೀಗ ಸಚಿವರಲ್ಲ. ಅಲ್ಲದೇ ಇತ್ತೀಚೆಗೆ ಅವರು ಹೃದಯ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದಾರೆ" ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಕಳೆದ ಅಕ್ಟೋಬರ್ನಲ್ಲಿ ಸೆಂಥಿಲ್ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: ಹರಿಯಾಣದಲ್ಲಿ ಸದ್ದು ಮಾಡಿದ ಮುಡಾ ಪ್ರಕರಣ: ಕಾಂಗ್ರೆಸ್ ವಿರುದ್ಧ ಪಿಎಂ ಮೋದಿ ವಾಗ್ದಾಳಿ