ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕಾಯ್ದೆಗೆ ಮಾಡಲಾದ ಕೆಲ ತಿದ್ದುಪಡಿಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿತು. ಸಂವಿಧಾನ (101ನೇ ತಿದ್ದುಪಡಿ) ಕಾಯ್ದೆ, 2016ರ ಸೆಕ್ಷನ್ 2, 9, 12 ಮತ್ತು 18ರ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠವು ಪಾಟ್ನಾ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು.
"ಇದು ಯಾವ ರೀತಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯಾಗಿದೆ? ಈ ವಿಷಯಕ್ಕೂ ನಿಮಗೂ ಸಂಬಂಧವೇನು? ಇದಕ್ಕೂ ಸಾರ್ವಜನಿಕರಿಗೂ ಸಂಬಂಧವೇನು? ಕ್ಷಮಿಸಿ, ನಿಮ್ಮ ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೂ ಒಳಗೊಂಡ ನ್ಯಾಯಪೀಠ ಹೇಳಿತು.
ಅರ್ಜಿದಾರರು ವಕೀಲರಾಗಿರುವುದರಿಂದ ಅವರು ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿಲ್ಲ ಮತ್ತು ಈ ಕಾನೂನಿನಿಂದ ಅವರಿಗೆ ಯಾವುದೇ ಹಾನಿಯಾಗಿಲ್ಲದಿರುವುದರಿಂದ ಅವರಿಗೆ ಜಿಎಸ್ಟಿ ಕಾಯ್ದೆಯ ತಿದ್ದುಪಡಿಗಳನ್ನು ಪ್ರಶ್ನಿಸುವ ಯಾವುದೇ ಹಕ್ಕು ಇಲ್ಲ ಎಂದು ಪಾಟ್ನಾ ಹೈಕೋರ್ಟ್ ಇದೇ ವರ್ಷದ ಏಪ್ರಿಲ್ನಲ್ಲಿ ತೀರ್ಪು ನೀಡಿತ್ತು.
ನ್ಯಾಯಾಲಯದಲ್ಲಿ ಮಂಡಿಸಲಾದ ಯಾವುದೇ ವಿಷಯವು ದೊಡ್ಡ ಪ್ರಮಾಣದ ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡ ಮೂಲಭೂತ ಪ್ರಾಮುಖ್ಯತೆಯನ್ನು ಹೊಂದಿದ್ದರೆ, ಅಂಥ ಸಂದರ್ಭಗಳಲ್ಲಿ ಪ್ರಶ್ನಿಸುವವರ ಅಧಿಕಾರದ ನಿಯಮವನ್ನು ಸಡಿಲಿಸಬಹುದು ಎಂಬ ಕಾನೂನಿನ ಸಹಜ ತತ್ವವನ್ನು ಎತ್ತಿ ಹಿಡಿಯಲು ಹೈಕೋರ್ಟ್ ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾದ ರಿಟ್ ಅರ್ಜಿಯಲ್ಲಿ ವಾದಿಸಲಾಗಿದೆ.