ತಿರುವನಂತಪುರಂ (ಕೇರಳ): ಕೇರಳ ಪಶು ವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲಪತಿ ಡಾ.ಎಂ.ಆರ್.ಸಸೀಂದ್ರನಾಥ್ ಅವರನ್ನು ಶನಿವಾರ ಕುಲಾಧಿಪತಿಗಳಾದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ವಿಶ್ವವಿದ್ಯಾಲಯದ ಹಾಸ್ಟೆಲ್ನ ಸ್ನಾನಗೃಹದಲ್ಲಿ ಫೆಬ್ರವರಿ 18ರಂದು ಬಿ.ವಿಸ್ಸಿ ವಿದ್ಯಾರ್ಥಿ ಜೆ.ಎಸ್.ಸಿದ್ಧಾರ್ಥ್ (20) ಎಂಬಾತ ಮೃತಪಟ್ಟಿದ್ದ. ಕ್ಯಾಂಪಸ್ನಲ್ಲಿ ಎಸ್ಎಫ್ಐ ಮುಖಂಡರನ್ನೊಳಗೊಂಡ ವಿದ್ಯಾರ್ಥಿಗಳ ಗುಂಪು ರ್ಯಾಗಿಂಗ್ ಮಾಡಿ, ಚಿತ್ರಹಿಂಸೆ ನೀಡಿದ್ದರಿಂದ ಸಿದ್ಧಾರ್ಥ್ ಸಾವನ್ನಪ್ಪಿದ್ದಾನೆ ಎಂದು ಸಹಪಾಠಿಗಳು ಮತ್ತು ಪೋಷಕರು ಆರೋಪಿಸಿದ್ದಾರೆ. ಈ ಘಟನೆ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದೇ ವಿಷಯವಾಗಿ ಶನಿವಾರ ಮೃತ ಸಿದ್ಧಾರ್ಥ್ ಕುಟುಂಬಸ್ಥರು ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಪೋಷಕರು ತಮ್ಮನ್ನು ಭೇಟಿಯಾದ 24 ಗಂಟೆಯೊಳಗೆ ವಿವಿಯ ಕುಲಾಧಿಪತಿಯಾದ ಆರೀಫ್ ಮೊಹಮ್ಮದ್ ಖಾನ್ ಅವರು ಕುಲಪತಿ ಡಾ.ಎಂ.ಆರ್.ಸಸೀಂದ್ರನಾಥ್ ಅವರನ್ನು ಅಮಾನತು ಮಾಡಿದ್ದಾರೆ. 2019ರಲ್ಲಿ ಸಸೀಂದ್ರನಾಥ್ ಕುಲಪತಿಯಾಗಿ ನೇಮಕಗೊಂಡಿದ್ದರು.
ನ್ಯಾಯಾಂಗ ತನಿಖೆಗೂ ರಾಜ್ಯಪಾಲರ ನಿರ್ಧಾರ:ಜೊತೆಗೆ ಈ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಲು ಕೂಡ ರಾಜ್ಯಪಾಲರು ತೀರ್ಮಾನಿಸಿದ್ದಾರೆ. ಈ ಬಗ್ಗೆ ಹೈಕೋರ್ಟ್ಗೆ ಪತ್ರ ಪಡೆದಿದ್ದಾರೆ. ಮೂರ್ನಾಲ್ಕು ದಿನಗಳಲ್ಲೇ ನ್ಯಾಯಾಂಗ ತನಿಖೆ ಆಗಬೇಕೆಂದೂ ಅವರು ಕೋರಿದ್ದಾರೆ. ಇದೇ ವೇಳೆ, ವಿವಿಯ ಕ್ಯಾಂಪಸ್ನಲ್ಲಿ ನಡೆದ ಇಂತಹ ಘಟನೆ ಬಗ್ಗೆ ನಿನ್ನೆಯಷ್ಟೇ ವಿವಿಯ ಅಧಿಕಾರಿಗಳು ನನಗೆ ಮಾಹಿತಿ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.