ನವದೆಹಲಿ: ಕೋಲ್ಕತ್ತಾ ಆಸ್ಪತ್ರೆಯಲ್ಲಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, "ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಸಮಾಜದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ ಮತ್ತು ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ" ಎಂದು ಹೇಳಿದರು.
ಕೆಂಪುಕೋಟೆಯಲ್ಲಿ ಧ್ವಜಾರೋಹಣ ಬಳಿಕ ಮಾತನಾಡಿದ ಅವರು, "ವಾಯುಪಡೆ, ಸೇನೆ, ನೌಕಾಪಡೆ ಮತ್ತು ಬಾಹ್ಯಾಕಾಶ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರ ನಾಯಕತ್ವಕ್ಕೆ ದೇಶ ಸಾಕ್ಷಿಯಾಗಿದೆ. ಆದರೆ ಈ ನಡುವೆ ಕೆಲವು ಆತಂಕಕಾರಿ ಬೆಳವಣಿಗೆಗಳು ದೇಶಕ್ಕೆ ಕಪ್ಪುಚುಕ್ಕೆ. ಇದರ ವಿರುದ್ಧ ಒಂದು ಸಮಾಜವಾಗಿ, ನಾವು ಗಂಭೀರವಾಗಿ ಯೋಚಿಸಬೇಕಾಗಿದೆ" ಎಂದರು.
"ನಮ್ಮ ತಾಯಂದಿರು ಮತ್ತು ಸಹೋದರಿಯರ ಮೇಲಿನ ದೌರ್ಜನ್ಯದ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದೇಶ, ಸಮಾಜ, ನಮ್ಮ ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮಹಿಳೆಯರ ಮೇಲಿನ ಅಪರಾಧಗಳ ತನಿಖೆ ವೇಗವಾಗಿ ನಡೆಯಬೇಕು. ರಾಕ್ಷಸ ಕೃತ್ಯಗಳಲ್ಲಿ ತೊಡಗಿದವರಿಗೆ ಆದಷ್ಟು ಬೇಗ ಕಠಿಣ ಶಿಕ್ಷೆ ನೀಡಿ, ಸಮಾಜದಲ್ಲಿ ನಂಬಿಕೆ ಮೂಡಿಸುವುದು ಅವಶ್ಯಕವಾಗಿದೆ" ಎಂದು ಹೇಳಿದ ಪ್ರಧಾನಮಂತ್ರಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 31 ವರ್ಷದ ತರಬೇತಿನಿರತ ವೈದ್ಯೆ ಮೇಲೆ ನಡೆದ ಹೀನ ಕೃತ್ಯವನ್ನು ಪ್ರಧಾನಿ ಖಂಡಿಸಿದರು.