ಪ್ರಯಾಗ್‌ರಾಜ್(ಉತ್ತರ ಪ್ರದೇಶ)/ಬೆಳಗಾವಿ:ಪವಿತ್ರಮಹಾಕುಂಭ ಮೇಳ ನಡೆಯುತ್ತಿರುವ ಇಲ್ಲಿನ ತ್ರಿವೇಣಿ ಸಂಗಮದ ಸಮೀಪ ತಡರಾತ್ರಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 30 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ ಹಾಗೂ 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಡಿಐಜಿ ವೈಭವ್ ಕೃಷ್ಣ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.
90 ಜನರನ್ನು ಆಸ್ಪತ್ರೆಗೆ ಕರೆತರಲಾಗಿದೆ. 60 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 25 ಮೃತರನ್ನು ಗುರುತಿಸಲಾಗಿದೆ. ಭಾರೀ ಜನಸಂದಣಿಯಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇನ್ನೂ ಕೆಲವರು ನಾಪತ್ತೆಯಾಗಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.
ತಲಾ 25 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ ಸಿಎಂ ಯೋಗಿ ಆದಿತ್ಯನಾಥ:ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಿಎಂ ಯೋಗಿ ಆದಿತ್ಯನಾಥ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಇಂತಹ ದುರಂತ ಹೇಗೆ ಸಂಭವಿಸಿತು ಎಂಬುದರ ಕುರಿತು ತಳಮಟ್ಟಕ್ಕೆ ಹೋಗಿ ಗಂಭೀರವಾದ ತನಿಖೆ ನಡೆಸಬೇಕಿದೆ ಎಂದು ಸಿಎಂ ಆದಿತ್ಯನಾಥ್ ಹೇಳಿದ್ದಾರೆ. ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಜನವರಿ 30 ರಂದು ಮಹಾಕುಂಭಕ್ಕೆ ಭೇಟಿ ನೀಡಿ ಕೂಲಂಕಷ ಪರಿಶೀಲನೆ ನಡೆಸಲಿದ್ದಾರೆ ಎಂದು ಅವರು ಇದೇ ವೇಳೆ ಘೋಷಿಸಿದ್ದಾರೆ. ಘಟನೆಯಲ್ಲಿ 90 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 30 ಜನರು ಮೃತಪಟ್ಟಿದ್ದಾರೆ. 36 ಮಂದಿ ಪ್ರಯಾಗ್‌ರಾಜ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ:ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರ ನಿರ್ಧರಿಸಿದೆ, ಇದಕ್ಕಾಗಿ ನಾವು ನ್ಯಾಯಮೂರ್ತಿ ಹರ್ಷ್ ಕುಮಾರ್, ಮಾಜಿ ಡಿಜಿ ವಿಕೆ ಗುಪ್ತಾ ಮತ್ತು ನಿವೃತ್ತ ಐಎಎಸ್ ಡಿಕೆ ಸಿಂಗ್ ನೇತೃತ್ವದ 3 ಸದಸ್ಯರ ನ್ಯಾಯಾಂಗ ಆಯೋಗವನ್ನು ರಚಿಸಿದ್ದೇವೆ. ಇನ್ನು ಸಿಎಂ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ನಿಯಂತ್ರಣ ಕೊಠಡಿಯಿಂದ ಇಡೀ ಘಟನೆಯ ಮೇಲೆ ನಿಗಾ ಇರಿಸಿದ್ದೇವೆ. ದಿನವಿಡೀ ಸಭೆಗಳು ನಡೆಸಲಾಗಿದ್ದು, ಘಟನೆಗಳಿಗೆ ಸಂಬಂಧಿಸಿದಂತೆ ಆಡಳಿತದೊಂದಿಗೆ ನಿರಂತರವಾಗಿ ಸಂವಹನ ನಡೆಸಲಾಗಿದೆ’’ ಎಂದು ಸಿಎಂ ಹೇಳಿದ್ದಾರೆ.
ಕಾಲ್ತುಳಿತದ ವೇಳೆ ನೂಕುನುಗ್ಗಲು ಉಂಟಾದಾಗ ಸ್ನಾನಕ್ಕೆ ಸೇರಿದ್ದ ಭಕ್ತರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಶೂ, ಚಪ್ಪಲಿ, ಬಟ್ಟೆಗಳು ಘಟನೆಯ ಗಂಭೀರತೆಯನ್ನು ಸೂಚಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೆಲವು ಅಖಾರಾಗಳು ಇದೀಗ ಅಮೃತ ಸ್ನಾನವನ್ನು ತಾತ್ಕಾಲಿಕವಾಗಿ ರದ್ದು ಮಾಡಿದ್ದಾರೆ.