ತಿರುಪತಿ (ಆಂಧ್ರಪ್ರದೇಶ) :ವೈಕುಂಠ ಏಕಾದಶಿಗೂ ಮುನ್ನ ತಿರುಪತಿಯಲ್ಲಿ ಭೀಕರ ದುರಂತ ನಡೆದಿದೆ. ವೈಕುಂಠದ್ವಾರ ಸರ್ವದರ್ಶನದ ಟಿಕೆಟ್ ವಿತರಣಾ ಕೇಂದ್ರಗಳಲ್ಲಿ ನೂಕುನುಗ್ಗಲು ಉಂಟಾದ ಪರಿಣಾಮ ಎರಡು ಸ್ಥಳಗಳಲ್ಲಿ ನಡೆದ ಕಾಲ್ತುಳಿತದಲ್ಲಿ ಐವರು ಮಹಿಳಾ ಭಕ್ತರು ಸೇರಿ 6 ಮಂದಿ ಸಾವಿಗೀಡಾಗಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸರ್ವದರ್ಶನ ಟಿಕೆಟ್ಗಾಗಿ ಭಕ್ತರು ವಿತರಣಾ ಕೇಂದ್ರಗಳತ್ತ ಒಮ್ಮೆಲೇ ನುಗ್ಗಿ ಬಂದ ಕಾರಣ, ಕಾಲ್ತುಳಿತ ಉಂಟಾಗಿದೆ. ಇದರಿಂದ ಹಲವು ಭಕ್ತರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಮೃತ ಭಕ್ತರಲ್ಲಿ ತಮಿಳುನಾಡಿನ ಸೇಲಂ ಮೂಲದ ಮಹಿಳೆ ಕೂಡ ಇದ್ದಾರೆ.
ಏನಾಯ್ತು?10, 11 ಮತ್ತು 12 ರಂದು ವೈಕುಂಠ ಏಕಾದಶಿ ನಿಮಿತ್ತ ಗುರುವಾರ ಬೆಳಗ್ಗೆ 5 ಗಂಟೆಯಿಂದ ವೈಕುಂಠದ್ವಾರ ಸರ್ವದರ್ಶನಕ್ಕೆ ಟಿಕೆಟ್ ನೀಡಲಾಗುವುದು ಎಂದು ಟಿಟಿಡಿ ಪ್ರಕಟಿಸಿತ್ತು. ಸಾಗರೋಪಾದಿಯಲ್ಲಿ ಬಂದಿರುವ ಭಕ್ತರು ಟಿಕೆಟ್ಗಾಗಿ ಕಾದು ಕುಳಿತಿದ್ದರು. ಹೆಚ್ಚಿನ ಭಕ್ತರು ಬಂದ ಹಿನ್ನೆಲೆಯಲ್ಲಿ ಟಿಟಿಡಿ ನಿಗದಿತ ಸಮಯಕ್ಕಿಂತ ಮೊದಲೇ ಅಂದರೆ ಇಂದೇ ಟಿಕೆಟ್ ನೀಡಲು ಕೌಂಟರ್ ತೆರೆದಿದೆ. ಈ ವೇಳೆ ಭಕ್ತರು ಟಿಕೆಟ್ ಪಡೆದುಕೊಳ್ಳಲು ಕೌಂಟರ್ಗಳತ್ತ ನುಗ್ಗಿ ಬಂದಿದ್ದಾರೆ. ಈ ವೇಳೆ ಭಾರೀ ಕಾಲ್ತುಳಿತ ಉಂಟಾಗಿದೆ.
ಎಲ್ಲ ಭಕ್ತರನ್ನು ಟಿಕೆಟ್ ಕೌಂಟರ್ನ ಹೊರಭಾಗದಲ್ಲಿ ನಿಲ್ಲಿಸಲಾಗಿತ್ತು. ಬಳಿಕ ಎಲ್ಲರೂ ಸರತಿ ಸಾಲಿನಲ್ಲಿ ಬರಲು ಸಿಬ್ಬಂದಿ ಸೂಚಿಸಿದ್ದಾರೆ. ಈ ವೇಳೆ ಭಕ್ತರು ಏಕಾಏಕಿ ಧಾವಿಸಿ ಬಂದಿದ್ದಾರೆ. ಇದರಿಂದ ಮಹಿಳೆಯರು, ಹಿರಿಯರು ಜನಸಂದಣಿಯಲ್ಲಿ ಸಿಲುಕಿಕೊಂಡಿದ್ದಾರೆ.