ಶ್ರೀನಗರ (ಜಮ್ಮು- ಕಾಶ್ಮೀರ):ಭಯೋತ್ಪಾದನೆಯಿಂದಲೇ ಕುಖ್ಯಾತಿಗೆ ಒಳಗಾಗಿರುವ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ 10ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಯೋಜನೆಯಾಗಿದೆ. ಜೂನ್ 21 ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದು, ಇಡೀ ಶ್ರೀನಗರವನ್ನು 'ತಾತ್ಕಾಲಿಕ ಕೆಂಪುವಲಯ' ಎಂದು ಘೋಷಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕದ ಮೊದಲ ಭೇಟಿ ಇದಾಗಿದ್ದು, ಸುರಕ್ಷತೆ ಕ್ರಮದ ಹಿನ್ನೆಲೆ ಶ್ರೀನಗರವನ್ನು 'ನೋಫ್ಲೈಯಿಂಗ್ ಝೋನ್' (ಹಾರಾಟ ನಿಷೇಧ ವಲಯ) ಎಂದೂ ಗುರುತಿಸಲಾಗಿದೆ. ಅಂದರೆ, ಅಂದಿನ ಮಟ್ಟಿಗೆ ಡ್ರೋನ್ ಹಾರಾಟ ಸೇರಿದಂತೆ ಯಾವುದೇ ಉಪಕರಣಗಳನ್ನು ಹಾರಿಸುವಂತಿಲ್ಲ ಎಂದು ಜಮ್ಮು ಕಾಶ್ಮೀರ ಪೊಲೀಸರು ಆದೇಶ ಹೊರಡಿಸಿದ್ದಾರೆ.
ಡ್ರೋನ್ ಹಾರಿಸುವಂತಿಲ್ಲ:ಸುರಕ್ಷತಾ ದೃಷ್ಟಿಯಿಂದ ಶ್ರೀನಗರದಲ್ಲಿ ಡ್ರೋನ್ ಹಾರಾಟವನ್ನೂ ನಿಷೇಧಿಸಲಾಗಿದೆ. ಹೀಗಾಗಿ ಸ್ಥಳೀಯರು ನಿಯಮಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ಡ್ರೋನ್ ನಿಯಮಗಳು 2021 ರ ನಿಬಂಧನೆಯಂತೆ ದಂಡನೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ (ಜೂನ್ 20) ಶ್ರೀನಗರಕ್ಕೆ ಆಗಮಿಸುತ್ತಾರೆ. ಶುಕ್ರವಾರ (ಜೂನ್ 21) ಬೆಳಗ್ಗೆ ಎಸ್ಕೆಐಸಿಸಿಯಲ್ಲಿ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ನಗರವನ್ನು 'ತಾತ್ಕಾಲಿಕ ರೆಡ್ ಝೋನ್' ಎಂದು ಘೋಷಿಸಲಾಗಿದೆ. ಈ ನಿಯಮ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಶ್ರೀನಗರ ಪೊಲೀಸರು ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.