ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ಪ್ರಾಥಮಿಕ ಶಿಕ್ಷಣ, ಬೆಂಗಳೂರಿನಲ್ಲಿ ನರ್ಸಿಂಗ್: ಬ್ರಿಟನ್​ನ ನೂತನ ಸಂಸದ ಈ ಸೋಜನ್ ಜೋಸೆಫ್! - UK INDIAN ORIGIN MP

ಆಗ್ನೇಯ ಇಂಗ್ಲೆಂಡ್‌ನ ಕೆಂಟ್‌ನಲ್ಲಿರುವ ಕನ್ಸರ್ವೇಟಿವ್ ಪಕ್ಷದ ಭದ್ರಕೋಟೆಯಾದ ಆಶ್‌ಫೋರ್ಡ್‌ ಕ್ಷೇತ್ರದಿಂದ ಕೇರಳ ಮೂಲದ ನರ್ಸ್ ಸೋಜನ್ ಜೋಸೆಫ್ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.

By PTI

Published : Jul 7, 2024, 8:53 PM IST

ಬ್ರಿಟನ್​ ಸಂಸತ್ತು ಚುನಾವಣೆಯಲ್ಲಿ ಗೆದ್ದ ಕೇರಳದ ಸೋಜನ್ ಜೋಸೆಫ್ ಕುಟುಂಬಸ್ಥರ ಸಂಭ್ರಮ
ಬ್ರಿಟನ್​ ಸಂಸತ್ತು ಚುನಾವಣೆಯಲ್ಲಿ ಗೆದ್ದ ಕೇರಳದ ಸೋಜನ್ ಜೋಸೆಫ್ ಕುಟುಂಬಸ್ಥರ ಸಂಭ್ರಮ (ETV Bharat)

ಲಂಡನ್: ಬ್ರಿಟನ್​ ಸಾರ್ವತ್ರಿಕ ಚುನಾವಣೆಯಲ್ಲಿ ಕೇರಳ ಮೂಲದ ಮಾನಸಿಕ ಆರೋಗ್ಯ ಪುರುಷ ನರ್ಸ್ ಸೋಜನ್ ಜೋಸೆಫ್ ಸಂಸದರಾಗಿ ಆಯ್ಕೆಯಾಗಿದ್ದಾರೆ. 22 ವರ್ಷಗಳ ಹಿಂದೆ ಕೇರಳದಿಂದ ವಲಸೆ ಹೋಗಿರುವ 49 ವರ್ಷದ ಸೋಜನ್ ಜೋಸೆಫ್ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ (ಎನ್‌ಹೆಚ್‌ಎಸ್) ಇದ್ದಾರೆ. ಜುಲೈ 4ರಂದು ನಡೆದ ಚುನಾವಣೆಯಲ್ಲಿ ಬ್ರಿಟನ್​ನ ಹೌಸ್ ಆಫ್ ಕಾಮನ್ಸ್​ಗೆ (ಸಂಸತ್ತು) ಲೇಬರ್ ಪಕ್ಷದಿಂದ ಚುನಾಯಿತರಾಗಿದ್ದಾರೆ.

ಆಗ್ನೇಯ ಇಂಗ್ಲೆಂಡ್‌ನ ಕೆಂಟ್‌ನಲ್ಲಿರುವ ಕನ್ಸರ್ವೇಟಿವ್ ಪಕ್ಷದ ಭದ್ರಕೋಟೆಯಾದ ಆಶ್‌ಫೋರ್ಡ್‌ನಲ್ಲಿ ಜೋಸೆಫ್ ಚುನಾವಣೆ ಗೆದ್ದಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಮಾನಸಿಕ ಆರೋಗ್ಯ ಸೇವೆಗಳನ್ನು ಖಾತ್ರಿಪಡಿಸುವ ಪ್ರತಿಜ್ಞೆಯೊಂದಿಗೆ ಮತದಾರರ ಮನೆ ಬಾಗಿಲಿಗೆ ತೆರಳಿ ಪ್ರಚಾರ ಮಾಡಿ, ಅವರ ಮನ ಗೆಲ್ಲುವಲ್ಲೂ ಯಶ ಕಂಡಿದ್ದಾರೆ. ಮಾಜಿ ಸಚಿವ ಡಾಮಿಯನ್ ಗ್ರೀನ್ ವಿರುದ್ಧ ಗೆಲುವು ಸಾಧಿಸಿರುವ ಜೋಸೆಫ್​, ಎದುರಾಳಿ ಅಭ್ಯರ್ಥಿಯ ವಲಸೆ ವಿರೋಧಿ ಹೇಳಿಕೆಗೆ ಬಲವಾದ ಹೊಡೆತ ನೀಡಿದ್ದಾರೆ. ಇದರಿಂದ ಈ ಚುನಾವಣೆಯಲ್ಲಿ ಡಾಮಿಯನ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಸ್ಥಳೀಯ ಕೌನ್ಸಿಲರ್ ಮತ್ತು ಬಿಎಎಂಇ (ಕಪ್ಪು, ಏಷ್ಯನ್ ಮತ್ತು ಅಲ್ಪಸಂಖ್ಯಾತ ಜನಾಂಗೀಯ) ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅವರು, ವೈದ್ಯಕೀಯ ವೃತ್ತಿ ಮೂಲಕ ಪ್ರಸಿದ್ಧಿ ಪಡೆದಿದ್ದರು. ಇದು ತಮ್ಮ ಹೊಸ ಸಂಸದೀಯ ಸವಾಲಿಗೆ ಅಣಿಗೊಳಿಸಿತ್ತು. ಆದರೆ, ಮಾನಸಿಕ ಆರೋಗ್ಯ ನರ್ಸ್​ ಆಗಿ ಎರಡು ದಶಕಗಳ ಸುದೀರ್ಘ ವೃತ್ತಿಜೀವನದ ಅನುಭವವು ಸಂಸತ್ತಿನಲ್ಲಿ ಹೊಸ ಕೆಲಸಕ್ಕೆ ಅಗತ್ಯವಾದ ಅನುಭೂತಿಯನ್ನು ನೀಡುತ್ತದೆ ಎಂದು ಜೋಸೆಫ್​ ಭಾವಿಸಿದ್ದಾರೆ.

ಅಂತಾರಾಷ್ಟ್ರೀಯ ಮ್ಯಾರಥಾನ್​ಗಳ ಆಯೋಜಕ: ಅಲ್ಲದೇ, ಆಶ್‌ಫೋರ್ಡ್‌ನ ಸ್ಥಳೀಯ ಜನಸಮುದಾಯಗಳೊಂದಿಗೆ ಅವರ ಸಂಪರ್ಕ ಹಾಗೂ 15 ವರ್ಷಗಳಿಂದ ತಮ್ಮ ಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ ವಾಸಿಸುತ್ತಿರುವುದು ಅವರಿಗೆ ಚುನಾವಣೆಯ ಸ್ಪರ್ಧಿಸಲು ಪ್ರೇರಣೆ ನೀಡಿದೆ. ಅಲ್ಲದೇ, ಚಾರಿಟಿಗಾಗಿ ಹಲವಾರು ಅಂತಾರಾಷ್ಟ್ರೀಯ ಮ್ಯಾರಥಾನ್‌ಗಳನ್ನು ಜೋಸೆಫ್ ಆಯೋಜಿಸಿದ್ದರು.

''ಆಶ್‌ಫೋರ್ಡ್ ಮತ್ತು ವಿಲ್ಲೆಸ್‌ಬರೋ ಅನ್ನು ನನ್ನ ಮನೆ ಎಂದೇ ಕರೆಯಲು ನಾನು ತುಂಬಾ ಹೆಮ್ಮೆಪಡುತ್ತೇನೆ. ವಿವಿಧ ದತ್ತಿಗಳಿಗಾಗಿ ಮ್ಯಾರಥಾನ್ ಓಟ ಮತ್ತು ಸ್ಥಳೀಯ ಆಸ್ಪತ್ರೆ ಚಾರಿಟಿಗಾಗಿ ಡ್ರ್ಯಾಗನ್ ಬೋಟ್ ರೇಸ್ ಸೇರಿದಂತೆ ಹಲವಾರು ವರ್ಷಗಳಿಂದ ನಾನು ನಿಧಿ ಸಂಗ್ರಹಿಸುವ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೇನೆ. ಸಮುದಾಯದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಸಂಪೂರ್ಣ ಸಾಮರ್ಥ್ಯ ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಅಂತರ್ಗತ ಸಮಾಜದಲ್ಲಿ ನಾನು ದೃಢವಾಗಿ ನಂಬುತ್ತೇನೆ'' ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನರ್ಸಿಂಗ್ ವ್ಯಾಸಂಗ: ಕೇರಳದ ಕೊಟ್ಟಾಯಂನಲ್ಲಿ ಶಾಲೆ ಶಿಕ್ಷಣ ಮುಗಿಸಿರುವ ಜೋಸೆಫ್, ಬೆಂಗಳೂರಿನ ಬಿಆರ್ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ನರ್ಸಿಂಗ್ ವ್ಯಾಸಂಗ ಪೂರ್ಣಗೊಳಿಸಿದ್ದರು. ಯುಕೆಯಲ್ಲಿ ಆರೋಗ್ಯ ರಕ್ಷಣೆ ನಾಯಕತ್ವದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲೂ ಪ್ರತಿಯೊಬ್ಬರಿಗೂ ಮಾನಸಿಕ ಮತ್ತು ದೈಹಿಕ ಆರೋಗ್ಯ ಸೇವೆಗಳ ಪ್ರವೇಶವನ್ನು ಸುಧಾರಿಸುವ ಬಗ್ಗೆ ಅವರು ಪ್ರಬಲವಾಗಿ ಮಾತನಾಡಿದ್ದರು.

ಆಗ ಸೋಜನ್ ಜೋಸೆಫ್ ಬ್ರಿಟನ್ ಇತಿಹಾಸದಲ್ಲಿ ಮೊದಲ ಮಲಯಾಳಿ ಸಂಸದರೂ ಹೌದು. ಜೋಸೆಫ್ ಗೆಲುವಿನ ಬಳಿಕ ಕೇರಳದ ಮನೆಯಲ್ಲಿ ಸಂಭ್ರಮ ಸಂಭ್ರಮ ಮನೆ ಮಾಡಿದೆ. ಸೋಜನ್ ಕಲಿಕೆ ಮತ್ತು ಕಲೆಯಲ್ಲಿ ಮುಂಚೂಣಿಯಲ್ಲಿದ್ದರು ಎಂದು ಅವರ ತಂದೆ ಚಾಮಕಲೈಲ್ ಜೋಸೆಫ್ ಹೇಳಿದ್ದಾರೆ.

ಇದನ್ನೂ ಓದಿ:ಯುಕೆ ಚುನಾವಣಾ ಫಲಿತಾಂಶ: ಸಂಸತ್ತಿಗೆ ದಾಖಲೆ ಸಂಖ್ಯೆಯ ಭಾರತೀಯ ಮೂಲದವರು ಆಯ್ಕೆ!

ABOUT THE AUTHOR

...view details