ಕೊಚ್ಚಿ:ಕೇರಳ ಚಲನಚಿತ್ರ ರಂಗದಲ್ಲಿ ತಲ್ಲಣ ಮೂಡಿಸಿರುವ ನ್ಯಾಯಮೂರ್ತಿ ಹೇಮಾ ಕಮಿಟಿ ವರದಿಯ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕಮಿಟಿಯ ವರದಿಯ ಬಗ್ಗೆ ತನಿಖೆ ನಡೆಸಲು ಕೇರಳ ಹೈಕೋರ್ಟ್ ನೇಮಿಸಿರುವ ವಿಶೇಷ ತನಿಖಾ ತಂಡವು (ಎಸ್ಐಟಿ) ತನ್ನ ಕೆಲಸವನ್ನು ಆರಂಭಿಸಿದ್ದು, ಮೊದಲ ಹಂತದಲ್ಲಿ ಕಮಿಟಿಯ ಮುಂದೆ ಹಾಜರಾಗಿ ಹೇಳಿಕೆಗಳನ್ನು ದಾಖಲಿಸಿರುವ 50 ಜನರನ್ನು ಖುದ್ದಾಗಿ ಭೇಟಿ ಮಾಡಲು ನಿರ್ಧರಿಸಿದೆ.
ಕೇರಳ ಚಲನಚಿತ್ರ ಉದ್ಯಮದಲ್ಲಿ ಮಹಿಳೆಯರ ಮೇಲೆ ನಡೆದಿವೆ ಎನ್ನಲಾದ ವ್ಯಾಪಕ ದೌರ್ಜನ್ಯಗಳ ಬಗ್ಗೆ ನ್ಯಾಯಮೂರ್ತಿ ಹೇಮಾ ಕಮಿಟಿಯು 2019ರಲ್ಲಿ ಸಿಎಂ ಪಿಣರಾಯಿ ವಿಜಯನ್ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು. ಈ ವರದಿಯ ಬಗ್ಗೆ ತನ್ನ ನೇರ ನಿಗಾದಲ್ಲಿ ತನಿಖೆ ನಡೆಸಲು ಕೇರಳ ಹೈಕೋರ್ಟ್ ಎಸ್ಐಟಿಯನ್ನು ರಚಿಸಿದೆ.
ಎಸ್ಐಟಿ ನಾಲ್ಕು ಮಹಿಳಾ ಐಎಎಸ್ ಅಧಿಕಾರಿಗಳನ್ನು ಒಳಗೊಂಡಿದ್ದು, ಅವರನ್ನು ನಾಲ್ಕು ತಂಡಗಳಾಗಿ ವಿಂಗಡಿಸಲಾಗಿದೆ. ಈ ತಂಡಗಳು ಹೇಮಾ ಸಮಿತಿಯ ಮುಂದೆ ಸಾಕ್ಷ್ಯ ನುಡಿದ 50 ಜನರನ್ನು ಭೇಟಿಯಾಗಲಿದೆ. ಈ ಪ್ರಕ್ರಿಯೆಯನ್ನು 10 ದಿನಗಳಲ್ಲಿ ಪೂರ್ಣಗೊಳಿಸಲು ಎಸ್ ಐಟಿ ಯೋಜಿಸಿದೆ. ಗುರುವಾರ ನ್ಯಾಯಾಲಯದ ವಿಶೇಷ ಪೀಠವು ಹೇಮಾ ಕಮಿಟಿಯ ವರದಿಯ ಸೆನ್ಸಾರ್ ಮಾಡದ ಆವೃತ್ತಿಯನ್ನು ಎಸ್ಐಟಿಗೆ ಹಸ್ತಾಂತರಿಸಿದೆ.
ಹೇಮಾ ಕಮಿಟಿ ವರದಿಯನ್ನು 5 ವರ್ಷಗಳ ಕಾಲ ಬಹಿರಂಗಪಡಿಸದೆ ಇಟ್ಟುಕೊಂಡಿದ್ದಕ್ಕಾಗಿ ಪಿಣರಾಯಿ ವಿಜಯನ್ ಸರ್ಕಾರವು ತೀವ್ರ ಟೀಕೆಗೆ ಗುರಿಯಾಗಿದೆ. ಕೇರಳ ಹೈಕೋರ್ಟ್ ವಿಶೇಷ ಪೀಠವು ಮಂಗಳವಾರ ಮೊದಲ ಬಾರಿಗೆ ಈ ಬಗ್ಗೆ ವಿಚಾರಣೆ ನಡೆಸಿ, ವಿಜಯನ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ವರದಿಯು 2020ರಲ್ಲಿಯೇ ಕೇರಳ ಪೊಲೀಸರ ಕೈಸೇರಿದ್ದರೂ ಒಂದೇ ಒಂದು ಎಫ್ಐಆರ್ ದಾಖಲಿಸದಿರುವ ಸರ್ಕಾರದ ನಿಷ್ಕ್ರಿಯತೆಯನ್ನು ಕೋರ್ಟ್ ಎತ್ತಿ ತೋರಿಸಿತು.