ಸಿದ್ದಿಪೇಟೆ (ತೆಲಂಗಾಣ): ರೇಷ್ಮೆ ಕೃಷಿಯಲ್ಲಿ ಸಿದ್ದಪೇಟೆ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ತೆಲಂಗಾಣ ರಾಜ್ಯ ರಚನೆಯಾಗುವುದಕ್ಕೂ ಮುನ್ನ ರಾಜ್ಯದಲ್ಲಿ ಕೇವಲ 30 ರಿಂದ 50 ಎಕರೆಯಲ್ಲಿ ಮಾತ್ರ ಹಿಪ್ಪುನೇರಳೆ ಕೃಷಿ ಮಾಡಲಾಗುತ್ತಿತ್ತು. ಆದರೆ, ಸದ್ಯ ತೆಲಂಗಾಣದಲ್ಲಿ 1127 ಎಕರೆ ಪ್ರದೇಶದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನೆರವಿನೊಂದಿಗೆ ಹಿಪ್ಪುನೇರಳೆ ಬೆಳೆಯಲಾಗುತ್ತಿದೆ. ರೇಷ್ಮೆ ಕೃಷಿಗೆ ಮೂಲ ಈ ಹಿಪ್ಪುನೇರಳೆ ಆಗಿರುವುದರಿಂದ, ಹಿಪ್ಪು ನೇರಳೆ ಕೃಷಿ ಹಾಗೂ ರೇಷ್ಮೆ ಕೃಷಿಯ ಮೂಲಕ ಇಲ್ಲಿನ ರೈತರು ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯುತ್ತಿದ್ದಾರೆ.
ಹಾಕಿದ ಬಂಡವಾಳಕ್ಕಿಂತ ಹೆಚ್ಚು ಲಾಭ ಬಂದರೆ ರೈತರಿಗೆ ಅದಕ್ಕಿಂತ ಖುಷಿಯ ವಿಚಾರ ಬೇರೆ ಇಲ್ಲ. ಹೀಗೆ ಸಿದ್ದಿಪೇಟೆ ಜಿಲ್ಲೆಯ ಚಂದಲಾಪುರದ ರೈತರು ಕಡಿಮೆ ಹೂಡಿಕೆ ಮಾಡಿ ಹಿಪ್ಪುನೇರಳೆ ಕೃಷಿ ಮಾಡಿ, ಹೆಚ್ಚು ಇಳುವರಿ ಪಡೆದು ಲಾಭ ಗಳಿಸುತ್ತಿದ್ದಾರೆ. ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಪಾದನೆ ಮಾಡುವ ಮೂಲಕ ಸಾಫ್ಟ್ವೇರ್ ಉದ್ಯೋಗಿಗಳಿಗೆ ಪೈಪೋಟಿ ನೀಡುತ್ತಿದ್ದಾರೆ.
ಒಮ್ಮೆ ಹಿಪ್ಪು ನೇರಳೆ ಗಿಡಗಳನ್ನು ನೆಟ್ಟರೆ ವರ್ಷವಿಡೀ ಇಳುವರಿ ಕೊಡುತ್ತದೆ. ಇತರ ಬೆಳೆಗಳಿಂತ ಇದು ವಿಭಿನ್ನವಾಗಿದ್ದು, ರೇಷ್ಮೆ ಹುಳಗಳಿಗೆ ಹಿಪ್ಪುನೇರಳೆ ಎಲೆಗಳಾದರೆ, ಇದರ ಜೊತೆಗೆ ಮಲ್ಬರಿ ಹಣ್ಣುಗಳೂ ದೊರೆಯುತ್ತವೆ. ಈ ಹಿಪ್ಪುನೇರಳೆ ನೈಸರ್ಗಿಕ ವಿಕೋಪಗಳನ್ನು ತಡೆದುಕೊಳ್ಳಬಹುದು. ಗಿಡಗಳನ್ನು ನೆಟ್ಟ ಪ್ರಾರಂಭದ ಹಂತದಲ್ಲಿ ಒಂದು ಅಥವಾ ಎರಡು ಬಾರಿ ನೀರು ಸಾಕು. ಪ್ರತಿ ಎರಡು ವಾರಗಳಿಗೊಮ್ಮೆ ಇದರ ಎಲೆಗಳನ್ನು ಕತ್ತರಿಸಿ ರೇಷ್ಮೆ ಹುಳುಗಳಿಗೆ ಆಹಾರವಾಗಿ ನೀಡಲಾಗುತ್ತದೆ. ರೇಷ್ಮೆ ಹುಳುಗಳು ಬೆಳೆದು ಉತ್ತಮ ಇಳುವರಿ ನೀಡುತ್ತವೆ ಎನ್ನುತ್ತಾರೆ ರೈತರು.