ನವದೆಹಲಿ:ದೇಶಾದ್ಯಂತ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಗೆ ಬೆದರಿ ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಅಲ್ಲಿಂದ ಪಲಾಯನ ಮಾಡಿರುವ ಶೇಖ್ ಹಸೀನಾ ಅವರು ಭಾರತದ ರಾಜಧಾನಿ ದೆಹಲಿಗೆ ಇಂದು (ಸೋಮವಾರ) ವಿಮಾನದಲ್ಲಿ ಬಂದಿಳಿದಿದ್ದಾರೆ. ನವದೆಹಲಿ ಬಳಿಯ ಗಾಜಿಯಾಬಾದ್‌ನ ಹಿಂಡನ್ ಏರ್‌ಬೇಸ್‌ನಲ್ಲಿ ಅವರ ವಿಮಾನ ಲ್ಯಾಂಡ್ ಆಯಿತು.
ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಹೋರಾಟದಿಂದಾಗಿ 200ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ದೇಶವೇ ಹೊತ್ತಿ ಉರಿಯುತ್ತಿದೆ. ಶೇಖ್ ಹಸೀನಾ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಡ ಹೇರಿ ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು. ಇದನ್ನು ಮನಗಂಡ ಹಸೀನಾ ಅಲ್ಲಿಂದ ಖಾಸಗಿ ವಿಮಾನದಲ್ಲಿ ಮೂಲಕ ತನ್ನ ಸಹೋದರಿಯೊಂದಿಗೆ ಭಾರತಕ್ಕೆ ಬಂದಿದ್ದಾರೆ. ಇಲ್ಲಿಂದ ಅವರು ಇಂಗ್ಲೆಂಡ್ಗೆ ತೆರಳಲಿದ್ದಾರೆ.
ಶೇಖ್ ಹಸೀನಾ ಅವರಿದ್ದ ವಿಮಾನ ಭಾರತದ ವಾಯುಗಡಿ ಪ್ರವೇಶಿಸುತ್ತಿದ್ದಂತೆ, ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ಅದನ್ನು ಹಿಂಬಾಲಿಸಿವೆ. ಉತ್ತರಪ್ರದೇಶ ಮತ್ತು ದೆಹಲಿಯ ಮಧ್ಯದ ಗಾಜಿಯಾಬಾದ್‌ನ ಏರ್‌ಬೇಸ್‌ನಲ್ಲಿ ವಿಮಾನ ಇಳಿಯಲು ಅನುವು ಮಾಡಿಕೊಡಲಾಯಿತು. ಬಳಿಕ ಭಾರತದ ಯುದ್ಧ ವಿಮಾನಗಳು ವಾಪಸ್ ತೆರಳಿವೆ.
ಪ್ರಧಾನಿ ಮೋದಿ, ರಾಹುಲ್ಗೆ ಮಾಹಿತಿ:ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಭಾರತದ ವಿದೇಶಾಂಗ ಇಲಾಖೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಪ್ರಧಾನಿ ಮೋದಿ ಮತ್ತು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಶೇಖ್ ಹಸೀನಾ ಅವರು ಭಾರತಕ್ಕೆ ಬಂದ ಬಗ್ಗೆ ಮಾಹಿತಿ ನೀಡಿದ್ದಾರೆ.