ಹೈದರಾಬಾದ್: ತೆಲಂಗಾಣದಲ್ಲಿ ನಡೆದಿದೆ ಎನ್ನಲಾದ ಕುರಿ ವಿತರಣೆ ಯೋಜನೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 700 ಕೋಟಿ ರೂ ಹಗರಣ ನಡೆದಿದೆ ಎಂದು ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಜತೆಗೆ ಪ್ರಕರಣದ ತನಿಖೆ ತೀವ್ರಗೊಳಿಸಿದ್ದಾರೆ.
ಸರ್ಕಾರದ ಯೋಜನೆಯಡಿ ನಡೆದಿರುವ ಈ ಹಗರಣದ ಹಿಂದೆ ಪ್ರಬಲ ನಾಯಕರ ಕೈವಾಡವಿದೆ ಎಂದೂ ಶಂಕಿಸಲಾಗಿದೆ. ಈ ಯೋಜನೆಗೆ ಅನಧಿಕೃತ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಕಂಪನಿಯೊಂದರ ವ್ಯವಸ್ಥಾಪಕ ಮೊಹಿದುದ್ದೀನ್, ಪ್ರಕರಣ ದಾಖಲಾಗುತ್ತಿದ್ದಂತೆ ದುಬೈಗೆ ಪರಾರಿಯಾಗಿದ್ದು, ಆತನನ್ನು ವಾಪಸ್ ಕರೆತರಲು ಲುಕೌಟ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಮೊಹಿದುದ್ದಿನ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಮಹತ್ವದ ಸಂಗತಿಗಳು ಬೆಳಕಿಗೆ ಬರುವ ನಿರೀಕ್ಷೆ ಇದೆ ಎಂದು ಎಸಿಬಿ ತಿಳಿಸಿದೆ.
ಬಂಧಿತ ಆರೋಪಿಗಳು ಮತ್ತು ಮೊಹಿದುದ್ದೀನ್ ಅವರ ಬ್ಯಾಂಕ್ ವಹಿವಾಟಿನ ಮೇಲೆ ಎಸಿಬಿ ಗಮನ ಹರಿಸಿದ್ದು, ಹಗರಣದ ಹಣವನ್ನು ಯಾರು ಹಂಚಿಕೊಂಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.