ಉದಯಪುರ (ರಾಜಸ್ಥಾನ):ಭೂಮಿಗೆ ಕಳೆ ತರಲು ಮಳೆ ಅನಿವಾರ್ಯವಾದರೆ, ಕೆಲವೊಮ್ಮೆ ಅದು ಅವಾಂತರವನ್ನೂ ಸೃಷ್ಟಿಸುತ್ತದೆ. ರಾಜಸ್ಥಾನದ ಉದಯಪುರದಲ್ಲಿ ಶನಿವಾರ ಕಲುಷಿತ ನೀರು ಕುಡಿದು ಮೂವರು ಸಾವನ್ನಪ್ಪಿ, 30ಕ್ಕೂ ಹೆಚ್ಚು ಮಂದಿ ಅನಾರೋಗ್ಯಕ್ಕೀಡಾದ ಘಟನೆ ನಡೆದಿದೆ. ಎಲ್ಲರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಶನಿವಾರ ಬೆಳಗ್ಗೆ ಪೋಪಲ್ಟಿ ಎಂಬ ಗ್ರಾಮದಲ್ಲಿ 30 ರಿಂದ 35 ಜನರು ಹಠಾತ್ ಅನಾರೋಗ್ಯಕ್ಕೀಡಾಗಿದ್ದಾರೆ. ವಾಂತಿ, ಭೇದಿ ಮತ್ತು ಹೊಟ್ಟೆ ನೋವಿನಿಂದ ನರಳಿದ್ದಾರೆ. ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಕೆಲವರು ಪ್ರಥಮ ಚಿಕಿತ್ಸೆ ಪಡೆದ ನಂತರ ಬಿಡುಗಡೆ ಹೊಂದಿದ್ದಾರೆ. 7- 8 ಮಂದಿ ತೀವ್ರ ಆರೋಗ್ಯವು ಗುರಿಯಾಗಿದ್ದಾರೆ. ಅವರನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂವರು ಸಾವು:ಇಬ್ಬರು ಮಕ್ಕಳು ಮತ್ತು ಒಬ್ಬ ವೃದ್ಧ ಸೇರಿ ಇಲ್ಲಿಯವರೆಗೆ ಮೂವರು ಸಾವನ್ನಪ್ಪಿದ್ದಾರೆ. ಇದಲ್ಲದೇ ಕೆಲವರ ಸ್ಥಿತಿ ಗಂಭೀರವಾಗಿದ್ದು, ಉದಯಪುರದ ಮಹಾರಾಣಾ ಭೂಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರ ಮೇಲೂ ತೀವ್ರ ನಿಗಾ ಇರಿಸಲಾಗಿದೆ. ಈ ಬಗ್ಗೆ ತನಿಖೆಗೂ ಸೂಚಿಸಲಾಗಿದೆ ಎಂದು ಸಿಎಂಎಚ್ ಅಧಿಕರಿ ಡಾ.ಶಂಕರ್ ಬಾಮ್ನಿಯಾ ತಿಳಿಸಿದ್ದಾರೆ.
ಪೂರ್ಣ ವಿಷಯ ಬೆಳಕಿಗೆ ಬಂದ ನಂತರ, ಅಧಿಕಾರಿಗಳ ಜೊತೆಗೆ ವೈದ್ಯರ ತಂಡವು ಗ್ರಾಮಕ್ಕೆ ತಲುಪಿದೆ. ಅಲ್ಲಿದ್ದ ಎಲ್ಲ ಜನರ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಈ ಅವಧಿಯಲ್ಲಿ ಹೆಚ್ಚಿನವರಿಗೆ ಹೊಟ್ಟೆನೋವು, ವಾಂತಿ, ಬೇಧಿ ಕಾಣಿಸಿಕೊಂಡಿದೆ. ಹಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಚರಂಡಿ- ಮಳೆ ನೀರು ಮಿಶ್ರ?:ಕುಡಿಯುವ ನೀರಿಗೆ ಮಳೆ ಮತ್ತು ಚರಂಡಿ ನೀರು ಮಿಶ್ರಣವಾಗಿರುವ ಕಾರಣ ಈ ಅನಾಹುತಕ್ಕೆ ಕಾರಣವಾಗಿದೆ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಗ್ರಾಮದ ಮಧ್ಯದಲ್ಲಿರುವ ಕುಡಿಯುವ ನೀರಿನ ಕೆರೆಯಿಂದ ಜನರು ನೀರು ಪಡೆದು ಕುಡಿಯುತ್ತಾರೆ. ಮಳೆ ನೀರಿನಿಂದ ಆ ಕೆರೆ ಕಲುಷಿತವಾಗುವ ಸಾಧ್ಯತೆ ಇದೆ. ಜೊತೆಗೆ ಚರಂಡಿ ನೀರೂ ಅದರಲ್ಲಿ ಸೇರಿರುವ ಬಗ್ಗೆ ಅನುಮಾನವಿದೆ. ಅಲ್ಲಿನ ನೀರಿನ ಮಾದರಿ ತೆಗೆದುಕೊಳ್ಳಲಾಗಿದೆ. ಅನಾರೋಗ್ಯ ಪೀಡಿತರ ವಾಂತಿ ಮತ್ತು ಮಲ ಮಾದರಿಗಳನ್ನೂ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗಿದೆ. ಈ ಕುರಿತು ಉಪವಿಭಾಗಾಧಿಕಾರಿ ಹಾಗೂ ಇತರ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ವೈದ್ಯರ ತಂಡ ನಿರಂತರವಾಗಿ ಚಿಕಿತ್ಸೆಯಲ್ಲಿ ತೊಡಗಿದೆ. ಮಾದರಿಯ ವರದಿ ಬಂದ ನಂತರವೇ ಸಂಪೂರ್ಣ ವಿಷಯ ಬಹಿರಂಗವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಭರ್ತಿಯತ್ತ ಕೆಆರ್ಎಸ್ ಜಲಾಶಯ: ಮುಂಜಾಗ್ರತ ಕ್ರಮವಾಗಿ ಕಾವೇರಿ ನದಿಗೆ 15 ಸಾವಿರ ಕ್ಯೂಸೆಕ್ ನೀರು ಬಿಡುಗಡೆ - 15 THOUSAND CUSECS WATER RELEASED