ಛಿಂದ್ವಾರಾ (ಮಧ್ಯಪ್ರದೇಶ) : ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಿಎಂ ಕಮಲ್ನಾಥ್ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹ ಮತ್ತೆ ಜೋರಾಗಿದೆ. ಅವರ ಬಿಗಿ ಹಿಡಿತದಲ್ಲಿರುವ ಛಿಂದ್ವಾರಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಬುಧವಾರ ಬಿಜೆಪಿ ಸೇರಿದ್ದಾರೆ. ಇದು ಮಾಜಿ ಸಿಎಂ ಆಗಮನಕ್ಕೆ ಹಾಕಿದ ಶ್ರೀಕಾರ ಎಂದು ವಿಶ್ಲೇಷಿಸಲಾಗಿದೆ.
ಕಾಂಗ್ರೆಸ್ ಹಿರಿಯ ನಾಯಕ ಕಮಲ್ ನಾಥ್ ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಸಸ್ಪೆನ್ಸ್ ಮುಂದುವರಿದಿರುವ ನಡುವೆ, ಅವರ ಬಿಗಿ ಹಿಡಿತದಲ್ಲಿರುವ ಮತ್ತು ಪಕ್ಷದ ಭದ್ರಕೋಟೆಯಾದ ಛಿಂದ್ವಾರಾ ಜಿಲ್ಲೆಯ ಹಲವಾರು ಸ್ಥಳೀಯ ಮುಖಂಡರು, ಕೌನ್ಸಿಲರ್‌ಗಳು, ಸರಪಂಚ್‌ಗಳು, ಜನಪದ್ ಸದಸ್ಯರು, ಕಾರ್ಯಕರ್ತರು ಮತ್ತು ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಜ್ವಲ್ ಸಿಂಗ್ ಚೌಹಾಣ್ ಅವರು ಕಮಲ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಮುಖ್ಯಮಂತ್ರಿ ಮೋಹನ್ ಯಾದವ್ ಅವರ ನೇತೃತ್ವದಲ್ಲಿ ಎಲ್ಲ ನಾಯಕರು ಕಮಲ ಬಾವುಟ ಹಿಡಿದರು. ಪಕ್ಷಕ್ಕೆ ಸ್ವಾಗತಿಸಿದ ಯಾದವ್ ಅವರು, ಕಾಂಗ್ರೆಸ್ ಪಕ್ಷದಲ್ಲಿನ ಅನೇಕರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಪಕ್ಷಕ್ಕೆ ಬರಲಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಕೈ ಮುಷ್ಟಿಯಲ್ಲಿ ಛಿಂದ್ವಾರಾ:ಛಿಂದ್ವಾರಾ ಕ್ಷೇತ್ರವು ರಾಜಕೀಯವಾಗಿ ಕಾಂಗ್ರೆಸ್ಗೆ ಅತಿ ಮಹತ್ವದ ಕ್ಷೇತ್ರವಾಗಿದೆ. ಮಾಜಿ ಸಿಎಂ ಆಗಿರುವ ಕಮಲ್ನಾಥ್ ಅವರು ಇಲ್ಲಿಂದಲೇ 9 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈಗ ಅವರ ಪುತ್ರ ನಕುಲ್ನಾಥ್ ಅವರು ಪ್ರತಿನಿಧಿಸುತ್ತಿದ್ದಾರೆ. 2019 ರ ಲೋಕಸಭೆ ಚುನಾವಣೆಯಲ್ಲಿ ಕಮಲ ಪಕ್ಷವು ರಾಜ್ಯದ 29ರ ಪೈಕಿ 28 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಛಿಂದ್ವಾರಾದ ಮತದಾರರು ಮಾತ್ರ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದರು.