ಶ್ರೀನಗರ(ಜಮ್ಮು ಮತ್ತು ಕಾಶ್ಮೀರ):ಗಂದರ್‌ಬಾಲ್ ಜಿಲ್ಲೆಯ ಶ್ರೀನಾಗಾ-ಲೇಹ್ ರಾಷ್ಟ್ರೀಯ ಹೆದ್ದಾರಿಯ ಸುರಂಗ ನಿರ್ಮಾಣ ಸ್ಥಳದಲ್ಲಿ ಭಾನುವಾರ ಸಂಜೆ ಉಗ್ರರು ದಾಳಿ ನಡೆಸಿದ್ದು, ವೈದ್ಯರು ಸೇರಿದಂತೆ ಏಳು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ದಾಳಿಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗೃಹ ಸಚಿವ ಅಮಿತ್ ಶಾ ಮತ್ತು ಉಳಿದ ನಾಯಕರಿಂದ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಸಂಜೆ ಕಾರ್ಮಿಕರು ಕೆಲಸ ಮುಗಿಸಿ ಗುಂಡ್‌ನಲ್ಲಿರುವ ತಮ್ಮ ಶಿಬಿರಕ್ಕೆ ಮರಳುತ್ತಿದ್ದಾಗ ದಾಳಿ ನಡೆದಿದೆ.
ಉಗ್ರರ ದಾಳಿಗೆ ಬುದ್ಗಾಮ್ ಜಿಲ್ಲೆಯ ಡಾಕ್ಟರ್ ಶಹನವಾಜ್ ಮತ್ತು ಇತರ ಆರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಹಾರದ ಫಹೀಮ್ ನಜೀರ್, ಕಲೀಂ, ಮೊಹಮ್ಮದ್ ಹನೀಫ್ ಹಾಗೇ ಜಮ್ಮುವಿನ ಶಶಿ ಅಬ್ರೋಲ್, ಮಧ್ಯಪ್ರದೇಶದ ಅನಿಲ್ ಶುಕ್ಲಾ, ಪಂಜಾಬ್‌ನ ಗುರ್ಮೀತ್ ಸಿಂಗ್ ಮೃತ ಕಾರ್ಮಿಕರು.
ಪ್ರಾಥಮಿಕ ವರದಿ ಪ್ರಕಾರ, 'ಇಬ್ಬರು ಭಯೋತ್ಪಾದಕರು ಕಾರ್ಮಿಕರ ಗುಂಪನ್ನು ಗುರಿಯಾಗಿಸಿಕೊಂಡ ಪರಿಣಾಮವಾಗಿ ಇಬ್ಬರು ಕಾರ್ಮಿಕರು ತಕ್ಷಣವೇ ಸಾವನ್ನಪ್ಪಿದ್ದಾರೆ. ನಂತರ ವೈದ್ಯರೊಂದಿಗೆ ಇತರ ನಾಲ್ವರು ಗಾಯಗೊಂಡಿದ್ದಾರೆ'. ದಾಳಿಯಲ್ಲಿ ಗಾಯಗೊಂಡ ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕಠಿಣ ಕ್ರಮಕ್ಕೆ ಕರೆ ನೀಡಿದ ಅಮಿತ್ ಶಾ:ಘಟನೆಯನ್ನು ಖಂಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, "ಇದು ಹೇಡಿತನದ ಹೇಯ ಕೃತ್ಯವಾಗಿದೆ. ಈ ಹೇಯ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಬಿಡಲಾಗುವುದಿಲ್ಲ ಮತ್ತು ನಮ್ಮ ಭದ್ರತಾ ಪಡೆಗಳಿಂದ ಕಠಿಣ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ. ಅಪಾರ ದುಃಖದ ಈ ಕ್ಷಣದಲ್ಲಿ, ಮೃತರ ಕುಟುಂಬಗಳಿಗೆ ನನ್ನ ಸಂತಾಪ ವ್ಯಕ್ತಪಡಿಸುತ್ತೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ" ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.