ನವದೆಹಲಿ:ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (VVPAT) ಮೂಲಕ ವಿದ್ಯುನ್ಮಾನ ಮತಯಂತ್ರ (EVM)ಗಳನ್ನು ಬಳಸಿ ಚಲಾವಣೆಯಾದ ಎಲ್ಲ ಮತಗಳನ್ನು ಪರಿಶೀಲಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಬುಧವಾರ (ಇಂದು) ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ನ್ಯಾಯಾಲಯವು ಈ ವಿಷಯದಲ್ಲಿ ಭಾರತ ಚುನಾವಣಾ ಆಯೋಗದಿಂದ ಕೆಲವು ಸ್ಪಷ್ಟೀಕರಣ ಕೇಳಿದ್ದು ಇಂದು ಮಧ್ಯಾಹ್ನ 2 ಗಂಟೆಗೆ ಉತ್ತರ ನೀಡುವಂತೆ ಚುನಾವಣಾ ಆಯೋಗದ ಅಧಿಕಾರಿಗೆ ಸೂಚಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಕೆಲ ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್ ಕೇಳಿದ್ದು, ಕಂಟ್ರೋಲ್ ಯೂನಿಟ್‌ನಲ್ಲಿ ಮೈಕ್ರೋ ಕಂಟ್ರೋಲರ್ ಅಳವಡಿಸಲಾಗಿದೆಯೇ ಅಥವಾ ವಿವಿಪಿಎಟಿಯಲ್ಲಿ ಅಳವಡಿಸಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಈ ಮೈಕ್ರೋ ಕಂಟ್ರೋಲರ್‌ಗಳನ್ನು ಒಮ್ಮೆ ಮಾತ್ರ ಪ್ರೋಗ್ರಾಮ್ ಮಾಡಲಾಗಿದೆಯೇ ಅಥವಾ ಅವುಗಳಲ್ಲಿ ಬದಲಾವಣೆಗಳನ್ನು ಮಾಡಬಹುದೇ?, ಇವಿಎಂನಲ್ಲಿ ಅಳವಡಿಸಲಾಗಿರುವ ಮೈಕ್ರೋ ಕಂಟ್ರೋಲರ್‌ನ ಕಾರ್ಯ ಪ್ರಕ್ರಿಯೆ ಬಗ್ಗೆ ವಿವರಿಸುವಂತೆ, ಇವಿಎಂ ಯಂತ್ರಗಳನ್ನು ಎಷ್ಟು ದಿನ ಇಟ್ಟುಕೊಳ್ಳಬಹುದಾಗಿದೆ ಎಂಬ ಪ್ರಶ್ನೆಗಳನ್ನು ಕೇಳಿದ್ದು, ಇದಕ್ಕೆ ಮಧ್ಯಾಹ್ನ ಉತ್ತರಿಸುವಂತೆ ತಿಳಿಸಿದೆ.