ಚೆನ್ನೈ (ತಮಿಳುನಾಡು):ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 30 ವರ್ಷಗಳ ಜೈಲುವಾಸ ಅನುಭವಿಸಿದ್ದ ಸಂತನ್ ಸಾವನ್ನಪ್ಪಿದ್ದಾರೆ. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಏಳು ಜನರಲ್ಲಿ ಶ್ರೀಲಂಕಾದ ಸಂತನ್ ಒಬ್ಬರು ಆಗಿದ್ದರು. 2022ರ ನವೆಂಬರ್ನಲ್ಲಿ ಸಂತನ್ನನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿತ್ತು.
ಸಂತನ್ ಅವರನ್ನು ತಿರುಚ್ಚಿ ಕೇಂದ್ರ ಕಾರಾಗೃಹದ ಸ್ಪೆಷಲ್ ಕ್ಯಾಂಪ್ನಲ್ಲಿ ಇರಿಸಲಾಗಿತ್ತು. ಈ ವೇಳೆ ಲಿವರ್ ಹಾನಿ ಹಾಗೂ ಕಾಲು ಊತದಿಂದ ಬಳಲುತ್ತಿದ್ದ ಅವರು ಇಂದು (ಫೆ.28) ಬೆಳಗ್ಗೆ 7.50ಕ್ಕೆ ಚೆನ್ನೈನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನಿರಂತರವಾಗಿ ಮನವಿ ಮಾಡಿದ್ದ ಸಂತನ್: ಕಳೆದ ಕೆಲ ತಿಂಗಳಿಂದ ತಿರುಚ್ಚಿ ಸ್ಪೆಷಲ್ ಕ್ಯಾಂಪಿನಲ್ಲಿರುವ ಸಂತನ್ ಅವರು, ತಮ್ಮ ಹುಟ್ಟೂರಾದ ಶ್ರೀಲಂಕಾಕ್ಕೆ ತೆರಳಲು ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ, ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಶ್ರೀಲಂಕಾ ಉಪ ಕಾನ್ಸುಲ್, ವಿದೇಶಾಂಗ ಸಚಿವರು ಸೇರಿದಂತೆ ಮತ್ತಿತರರಿಗೆ ಪತ್ರ ಬರೆದಿದ್ದರು. ಕಳೆದ 32 ವರ್ಷಗಳಿಂದ ನನ್ನ ತಾಯಿಯನ್ನು ನೋಡಿಲ್ಲ, ಅವರ ವೃದ್ಧಾಪ್ಯದಲ್ಲಿ ಅವರ ಜೊತೆ ಬಾಳಬೇಕಿದೆ. ಮಗನಾಗಿ ನನ್ನ ತಾಯಿಗೆ ಸಹಾಯ ಮಾಡಲು ಬಯಸುತ್ತೇನೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದರು.