ಕೋಲ್ಕತ್ತಾ (ಪಶ್ಚಿಮ ಬಂಗಾಳ) :ದೇಶಾದ್ಯಂತ ಭಾರೀ ಸದ್ದು ಮಾಡಿ, ತೀವ್ರ ಪ್ರತಿಭಟನೆಗಳಿಗೆ ಕಾರಣವಾಗಿದ್ದ ಕೋಲ್ಕತ್ತಾದ ಪ್ರಸಿದ್ಧ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯೆ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿಯಾದ ಸಂಜಯ್ ರಾಯ್‌ಗೆ ನ್ಯಾಯಾಲಯವು ಆಜೀವ ಜೈಲು ಶಿಕ್ಷೆ ವಿಧಿಸಿ ಸೋಮವಾರ ಆದೇಶಿಸಿದೆ.
ಸೀಲ್ಡಾದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಅವರಿದ್ದ ಪೀಠವು, ಶನಿವಾರ (ಜನವರಿ 18 ರಂದು) ಪೊಲೀಸರ ವಶದಲ್ಲಿದ್ದ ಏಕೈಕ ಆರೋಪಿ ಸಂಜಯ್ ರಾಯ್ ಅಪರಾಧಿ ಎಂದು ಘೋಷಿಸಿ, ತೀರ್ಪು ಕಾಯ್ದಿರಿಸಿತ್ತು. ಇಂದು ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ಪ್ರಕಟಿಸಿದರು.
ಕರ್ತವ್ಯನಿರತ ವೈದ್ಯೆಯನ್ನು ಅತ್ಯಾಚಾರ ಮಾಡಿದ ಕೊಲೆ ಪ್ರಕರಣದಲ್ಲಿ ಅಪರಾಧಿಗೆ ಮರಣದಂಡನೆ ವಿಧಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಈ ಕುರಿತು ತೀರ್ಪು ಪ್ರಕಟ ವೇಳೆ ನ್ಯಾಯಾಧೀಶರು, ಇದೊಂದು 'ಅಪರೂಪದಲ್ಲಿ ಅಪರೂಪ 'ಪ್ರಕರಣದ ಅಡಿಯಲ್ಲಿ ಬರುವುದಿಲ್ಲ. ಹೀಗಾಗಿ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಅವಕಾಶವಿಲ್ಲ ಎಂದರು.
ಮೃತ ವೈದ್ಯೆಯ ಕುಟುಂಬಕ್ಕೆ ಪರಿಹಾರ :ಮೃತ ವೈದ್ಯೆಯ ಕುಟುಂಬಕ್ಕೆ 17 ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯವು ಇದೇ ವೇಳೆ ನಿರ್ದೇಶನ ನೀಡಿತು. ತೀರ್ಪು ಪ್ರಕಟದ ಕೊನೆಯ ಹಂತದವರೆಗೂ ಅಪರಾಧಿ ಸಂಜಯ್ ರಾಯ್ ತಾನು ನಿರಪರಾಧಿ ಎಂದು ಹೇಳುತ್ತಲೇ ಬಂದಿದ್ದ.