ತಿರುವನಂತಪುರಂ: ಶಬರಿಮಲೆಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಸ್ಪಾಟ್ ಬುಕಿಂಗ್ ಸ್ಥಗಿತಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಕೇರಳದಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ. ತೀರ್ಥಯಾತ್ರೆಯ ಸೀಸನ್ನಲ್ಲಿ ಭಕ್ತರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಸ್ಪಾಟ್ ಬುಕಿಂಗ್ ಅನ್ನು ಮತ್ತೆ ಆರಂಭಿಸಬೇಕೆಂದು ಬೇಡಿಕೆಗಳು ಹೆಚ್ಚುತ್ತಿವೆ.
ಸ್ಪಾಟ್ ಬುಕಿಂಗ್ ರದ್ದು ವಿವಾದವೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್ಡಿಎಫ್) ಪ್ರಮುಖ ಮಿತ್ರ ಪಕ್ಷವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಸರ್ಕಾರವು ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಬಹಿರಂಗವಾಗಿ ಕರೆ ನೀಡಿದೆ. ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಅವರು ಅಸ್ತಿತ್ವದಲ್ಲಿರುವ ಆನ್ ಲೈನ್ ವ್ಯವಸ್ಥೆಯೊಂದಿಗೆ ಸ್ಪಾಟ್ ಬುಕಿಂಗ್ ಅನ್ನು ಮತ್ತೆ ಆರಂಭಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ತಿರುವನಂತಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವಂ, "ಈ ಪರಿಸ್ಥಿತಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಆರ್ಎಸ್ಎಸ್ಗೆ ಅವಕಾಶ ನೀಡಬೇಡಿ" ಎಂದು ಹೇಳಿದರು.
"ನಂಬಿಕೆಯ ಸೋಗಿನಲ್ಲಿ ಭಕ್ತರನ್ನು ದಾರಿ ತಪ್ಪಿಸುವ ಮೂಲಕ ಅನೇಕರು ಸರ್ಕಾರದ ವಿರುದ್ಧ ಸಂಘರ್ಷ ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ. ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯವಾಗಿದ್ದರೂ, ಹಠಾತ್ ಬದಲಾವಣೆಯಿಂದ ಉಂಟಾಗಿರುವ ಗೊಂದಲವನ್ನು ಪರಿಹರಿಸಬೇಕು. ವರ್ಚುವಲ್ ಬುಕಿಂಗ್ ಒಂದು ಹೆಜ್ಜೆ ಮುಂದಿದ್ದರೂ, ಎಲ್ಲಾ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸ್ಪಾಟ್ ಬುಕಿಂಗ್ ಕೂಡ ಅತ್ಯಗತ್ಯ. ಅಯ್ಯಪ್ಪ ಭಕ್ತರು ತಮ್ಮ ಹರಕೆಗಳನ್ನು ಪಾಲಿಸಿದ ನಂತರ ದೇವರ ದರ್ಶನ ಸಿಗದೆ ಅನಿವಾರ್ಯವಾಗಿ ಸುಮ್ಮನೆ ಮರಳಿ ಹೊರಡುವ ಸಂದರ್ಭ ಎದುರಾಗುತ್ತಿದೆ. ಆದರೆ ಆರ್ಎಸ್ಎಸ್ ಈ ಪರಿಸ್ಥಿತಿಯ ಲಾಭ ಪಡೆಯಲು ನೋಡುತ್ತಿದೆ. ಆರ್ಎಸ್ಎಸ್ನ ಗುರಿ ಧಾರ್ಮಿಕವಲ್ಲ; ಇದು ರಾಜಕೀಯವಾಗಿದ್ದು, ಎಡಪಂಥೀಯರ ವಿರುದ್ಧ ಉದ್ವಿಗ್ನತೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ." ಎಂದು ಅವರು ವಿಶ್ವಂ ತಿಳಿಸಿದರು.