ದೆಹಲಿ:ಕಚ್ಚತೀವು ದ್ವೀಪದ ವಿವಾದ ವಿಚಾರವಾಗಿ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಕಾಂಗ್ರೆಸ್ ಮತ್ತು ಡಿಎಂಕೆ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಕಾಂಗ್ರೆಸ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ ಪಕ್ಷಕ್ಕೆ ಕಚ್ಚತೀವು ದ್ವೀಪದ ಜವಾಬ್ದಾರಿ ಇಲ್ಲದಿದ್ದರೂ ಅದರ ಬಗ್ಗೆ ಮಾತನಾಡುತ್ತಿವೆ ಎಂದಿದ್ದಾರೆ.
ಕಚ್ಚತೀವು ದ್ವೀಪದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು. ಇದರ ಬೆನ್ನಲ್ಲೇ ಇಂದು ದೆಹಲಿಯಲ್ಲಿ ಕಚ್ಚತೀವು ದ್ವೀಪ ವಿಚಾರದ ಪ್ರಸ್ತುತತೆಯನ್ನು ವಿವರಿಸುವ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಎಸ್ ಜೈಶಂಕರ್ ಮಾತನಾಡಿದರು. ಈ ವೇಳೆ ಜೈಶಂಕರ್ "1974 ರಲ್ಲಿ, ಆಗಿನ ಭಾರತ ಸರ್ಕಾರ ಶ್ರೀಲಂಕಾಕ್ಕೆ ಕಚ್ಚತೀವು ದ್ವೀಪವನ್ನು ಕಡಲ ಗಡಿ ಒಪ್ಪಂದ ಮಾಡಿಕೊಂಡು ಹಸ್ತಾಂತರಿಸಿದ್ದರು ಎಂದು ಹೇಳಿದ್ದಾರೆ.
ಡಿಎಂಕೆ ವಿರುದ್ಧ ಮೋದಿ ಪೋಸ್ಟ್: ಈಗಾಗಲೇ ಕಚ್ಚತೀವುಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮತ್ತೆ ಎಕ್ಸ್‌ನಲ್ಲಿ ಡಿಎಂಕೆ ವಿರುದ್ಧ ಬರೆದು ಪೋಸ್ಟ್ ಮಾಡಿದ್ದಾರೆ. "ತಮಿಳುನಾಡಿನ ಆಡಳಿತ ಪಕ್ಷವು ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡಲು ಏನನ್ನೂ ಮಾಡಿಲ್ಲ ಎಂದು ಆರೋಪಿಸಿ ಡಿಎಂಕೆಯನ್ನು ಗುರಿಯಾಗಿಸಿದ್ದಾರೆ.
"ಭಾರತ ಸರ್ಕಾರ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಹಸ್ತಾಂತರಿಸುವ ವಿಚಾರದ ಬಗ್ಗೆ ಈಗ ಹೊರಹೊಮ್ಮುತ್ತಿರುವ ಹೊಸ ವಿಚಾರಗಳು ಡಿಎಂಕೆ ಪಕ್ಷದ ದ್ವಂದ್ವ ನೀತಿಯನ್ನು ಸಂಪೂರ್ಣವಾಗಿ ಬಿಚ್ಚಿಟ್ಟಿವೆ. ಕಾಂಗ್ರೆಸ್ ಮತ್ತು ಡಿಎಂಕೆ ಕುಟುಂಬ ರಾಜಕೀಯದ ಘಟಕಗಳಾಗಿವೆ. ಅವರು ತಮ್ಮ ಸ್ವಂತ ಪುತ್ರರು ಮತ್ತು ಹೆಣ್ಣುಮಕ್ಕಳು ಮಾತ್ರ ಏಳಿಗೆಯಾಗಲು ಕಾಳಜಿ ವಹಿಸುತ್ತಾರೆ. ಬೇರೆಯವರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಕಚ್ಚತೀವು ಮೇಲಿನ ಅವರ ನಿರ್ಲಕ್ಷ್ಯವು ನಮ್ಮ ಬಡ ಮೀನುಗಾರರು ಮತ್ತು ವಿಶೇಷವಾಗಿ ಮೀನುಗಾರ ಮಹಿಳೆಯರ ಹಿತಾಸಕ್ತಿಗಳಿಗೆ ಧಕ್ಕೆ ತಂದಿದೆ'' ಎಂದು ಎಕ್ಸ್‌ನಲ್ಲಿ ಹೇಳಿದ್ದಾರೆ.
ಇದೇ ವಿಚಾರವಾಗಿ ಮೋದಿ ಅವರು ಭಾನುವಾರ ಕಾಂಗ್ರೆಸ್ ವಿರುದ್ಧ "ಭಾರತದ ಏಕತೆ, ಸಮಗ್ರತೆ ಮತ್ತು ಹಿತಾಸಕ್ತಿಗಳನ್ನು ದುರ್ಬಲಗೊಳಿಸುತ್ತಿರುವ ಕೆಲಸವನ್ನು 75 ವರ್ಷಗಳಿಂದ ಕಾಂಗ್ರೆಸ್ ಮಾಡುತ್ತ ಬರುತ್ತಿದೆ'' ಎಂದು ಆರೋಪಿಸಿದ್ದರು.
ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಭಾರತ ಮತ್ತು ಲಂಕಾ ನಡುವಿನ 1974 ರ ಒಪ್ಪಂದದ ಕುರಿತು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಕೇಳಿದ ಪ್ರಶ್ನೆಗಳಿಗೆ ಆರ್‌ಟಿಐ ಉತ್ತರವನ್ನು ಆಧರಿಸಿ ಕಚ್ಚತೀವು ದ್ವೀಪದ ಕುರಿತು ಮಾಧ್ಯಮ ವರದಿಯಾಗಿದೆ.
ಇದನ್ನೂ ಓದಿ:ಕಾರ್ಯಕರ್ತರು ಬೂತ್ ಮಟ್ಟದ ಪದಾಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ವರ್ಚುಯಲ್ ಟಿಫಿನ್ ಸಭೆ - PM Modi Virtual Meeting