ಹೈದರಾಬಾದ್:ಭಾರೀ ವಂಚನೆ ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯವು (ಇಡಿ) 580 ಬ್ಯಾಂಕ್ ಖಾತೆಗಳಲ್ಲಿದ್ದ 32 ಕೋಟಿ ರೂ. ಹಣವನ್ನು ಜಪ್ತಿ ಮಾಡಿದೆ. ವೆಬ್‌ಸೈಟ್, ಹೋಟೆಲ್ ಮತ್ತು ರೆಸಾರ್ಟ್‌ಗಳಿಗೆ ರೇಟಿಂಗ್ ನೀಡುವ ನೆಪದಲ್ಲಿ ಈ ವಂಚನೆ ನಡೆಸಲಾಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಈ ಹಿಂದೆ ಕಮಿಷನ್ ಹೆಸರಿನಲ್ಲಿ ವಂಚಿಸಿದ್ದಾರೆ ಎಂದು ಹಲವು ನಿರುದ್ಯೋಗಿಗಳ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದರು. ದೇಶಾದ್ಯಂತ ಇದೇ ರೀತಿ ವಂಚನೆ ಮಾಡಿರುವುದು ಪತ್ತೆಯಾಗಿದ್ದು, ಸುಮಾರು 50 ಪ್ರಕರಣಗಳು ದಾಖಲಾಗಿವೆ. ಇವುಗಳನ್ನು ಆಧರಿಸಿ ಇಡಿ ತನಿಖೆ ನಡೆಸುತ್ತಿದ್ದು ತನಿಖೆ ವೇಳೆ ಕುತೂಹಲಕಾರಿ ಸಂಗತಿಗಳು ಬಯಲಿಗೆ ಬಂದಿವೆ.
ಸೈಬರ್ ವಂಚಕರು ಅಮಾಯಕ ಯುವಕರನ್ನು ಬಲೆಗೆ ಬೀಳಿಸಿಕೊಂಡು ಸುಮಾರು 524 ಕೋಟಿ ರೂಪಾಯಿ ವಂಚನೆ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇದೀಗ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ 32 ಕೋಟಿ ರೂ. ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮಾಯಕರಿಗೆ ಗಾಳ: ಪಾರ್ಟ್ ಟೈಂ ಜಾಬ್ ಹೆಸರಿನಲ್ಲಿ ನಿರುದ್ಯೋಗಿಗಳಿಗೆ ಸೈಬರ್ ಅಪರಾಧಿಗಳು ವಾಟ್ಸ್ಆ್ಯಪ್ ಮತ್ತು ಟೆಲಿಗ್ರಾಮ್‌ನಂತಹ ಅಪ್ಲಿಕೇಶನ್‌ಗಳನ್ನು ಬಳಸಿ, ಬಲೆಗೆ ಬೀಳಿಸುತ್ತಿದ್ದರು. ಹೋಟೆಲ್, ಟೂರಿಸ್ಟ್ ವೆಬ್‌ಸೈಟ್, ರೆಸಾರ್ಟ್ ಸೇರಿದಂತೆ ಇತ್ಯಾದಿಗಳಿಗೆ ರೇಟಿಂಗ್ ನೀಡಿದರೆ, ನಿಮಗೆ 1000 ರೂ.ನಿಂದ 1500 ರೂ.ವರೆಗೆ ಆದಾಯ ಸಿಗುತ್ತದೆ ಎಂದು ನಂಬಿಸುತ್ತಿದ್ದರು.
ಇಂತಹ ಆಫರ್ಗಳನ್ನು ನೀಡುತ್ತಾ ಯುವಕರನ್ನು ಸೆಳೆಯತ್ತಲೇ, ಇದನ್ನು ಪ್ರತಿಕ್ರಿಯಿಸಿದವರಿಗೆ ಲಿಂಕ್‌ಗಳನ್ನು ಕಳುಹಿಸಲಾಗುತ್ತಿತ್ತು. ಬಳಿಕ ಬ್ಯಾಂಕ್ ವಿವರಗಳು ಸೇರಿದಂತೆ ಎಲ್ಲ ವೈಯಕ್ತಿಕ ವಿವರಗಳನ್ನು ಅದರಲ್ಲಿ ನಮೂದಿಸಲು ಹೇಳುತ್ತಿದ್ದರು. ಈ ವಂಚಕರು ತಮ್ಮ ಮೇಲೆ ವಿಶ್ವಾಸ ಹಾಗೂ ನಂಬಿಕೆ ಬರಲೆಂದು ಆರಂಭದಲ್ಲಿ ಕಮಿಷನ್ ಅಡಿ ವಾಲೆಟ್‌ನಲ್ಲಿ ಒಂದಷ್ಟು ಹಣವನ್ನು ಖಾತೆಗಳಿಗೆ ಜಮಾ ಮಾಡುತ್ತಿದ್ದರು. ಗ್ರೂಪ್ನಲ್ಲಿದ್ದ ಕೆಲ ವಂಚಕರೇ ಚಾಟ್ ಮಾಡುವಂತೆ ನಟಿಸಿ ನಂಬಿಕೆ ಬರುವಂತೆ ಮಾಡುತ್ತಿದ್ದರು. ಹೀಗೆ ಪ್ರತಿ ಟಾಸ್ಕ್ ನಡೆಸುತ್ತಾ ಕೊನೆಗೆ ಬಲೆಗೆ ಬಿದ್ದ ನಂತರ ಆದಾಯ ಗಳಿಸಲು ಸ್ವಲ್ಪ ಹಣವನ್ನು ಠೇವಣಿ ಮಾಡುವ ಅವಶ್ಯಕತೆ ಇದೆ ಎಂದು ಹೇಳಿ ಮೋಸದ ಜಾಲಕ್ಕೆ ಸಿಲುಕಿಸಿಕೊಳ್ಳುತ್ತಿದ್ದರು. ಠೇವಣಿ ಮಾಡದಿದ್ದಲ್ಲಿ, ವಾಲೆಟ್ ಬ್ಯಾಲೆನ್ಸ್‌ಗಳನ್ನು ಫ್ರೀಜ್ ಮಾಡಲಾಗುತ್ತದೆ ಎಂದು ಹೇಳಿ ಮತ್ತಷ್ಟು ಹಣ ವಸೂಲಿ ಮಾಡುತ್ತಿದ್ದರು. ಇದಾದ ಬಳಿಕ ಯುವಕರಿಗೆ ಸಂಪರ್ಕಕ್ಕೆ ಬರುವುದನ್ನೂ ನಿಲ್ಲಿಸಿ ಬಿಡುತ್ತಿದ್ದರು.
ಈ ವಂಚನೆ ಜಾಲದ ಮಾಸ್ಟರ್ ಮೈಂಡ್ ಯುಎಇಯಲ್ಲಿದ್ದು, ನಕಲಿ ದಾಖಲೆಗಳೊಂದಿಗೆ ಬ್ಯಾಂಕ್ ಖಾತೆಗಳನ್ನು ತೆರೆದಿರುವುದನ್ನು ಇಡಿ ಪತ್ತೆ ಹಚ್ಚಿದೆ. ಠೇವಣಿಯಾಗಿದ್ದ ಹಣವನ್ನು ಇತರ ಖಾತೆಗಳಿಗೆ ವರ್ಗಾಯಿಸಿ, ಅಲ್ಲಿಂದ ಕ್ರಿಪ್ಟೋ ಕರೆನ್ಸಿಯಾಗಿ ಪರಿವರ್ತಿಸಿ ಹವಾಲಾ ರೂಪದಲ್ಲಿ ಸಾಗಾಟ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಹಣವನ್ನು ವಿದೇಶಕ್ಕೆ ಸಾಗಿಸಿರುವ ಬಗ್ಗೆಯೂ ಮಾಹಿತಿ ಇದೆ. ಕೆಲ ಮಧ್ಯವರ್ತಿಗಳಿಂದ ಪಡೆದ ಡೆಬಿಟ್ ಕಾರ್ಡ್, ಸಿಮ್ ಕಾರ್ಡ್, ಚೆಕ್ಬುಕ್ಗಳನ್ನು ವಶಕ್ಕೆ ಪಡೆಯಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:ದಾಖಲೆ ಪ್ರಮಾಣದಲ್ಲಿ ಹೆಚ್ಚುತ್ತಿವೆ ಸೈಬರ್ ವಂಚನೆ ಪ್ರಕರಣ; ಇದರಿಂದ ತಪ್ಪಿಸಿಕೊಳ್ಳಲು ಜನರು ಏನ್ ಮಾಡಬೇಕು?