ಪುಣೆ, ಮಹಾರಾಷ್ಟ್ರ : ಮಹತ್ವದ ಬೆಳವಣಿಗೆಯೊಂದರಲ್ಲಿ ಪುಣೆ ವಲಯದ ಜಿಎಸ್ಟಿ ಗುಪ್ತಚರ ನಿರ್ದೇಶನಾಲಯದ (ಡಿಜಿಜಿಐ) ಘಟಕವು 145 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಬಹು - ರಾಜ್ಯ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ದಂಧೆಯನ್ನು ಭೇದಿಸಿದೆ ಮತ್ತು ರಾಜಸ್ಥಾನದ ಓರ್ವ ವ್ಯಕ್ತಿಯನ್ನು ಬಂಧಿಸಿದೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.
ಪುಣೆ ಮತ್ತು ಗೋವಾದ ಕೆಲವು ಸಂಸ್ಥೆಗಳ ವಿರುದ್ಧ ತನಿಖೆಯನ್ನು ಪ್ರಾರಂಭಿಸಿದ ನಂತರ ಪುಣೆ ವಲಯ ಘಟಕವು ವಾರಾಂತ್ಯದಲ್ಲಿ ಈ ಕಾರ್ಯಾಚರಣೆ ನಡೆಸಿದೆ. ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಾದ್ಯಂತ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ದಂಧೆ ಹರಡಿದೆ ಎಂಬುದು ತನಿಖೆಯ ವೇಳೆ ಕಂಡು ಬಂದಿದೆ.
ಈ ಹಗರಣವು ಕನಿಷ್ಠ 50 ಬೋಗಸ್ ಸಂಸ್ಥೆಗಳನ್ನು ಒಳಗೊಂಡಿದೆ. ಈ ನಕಲಿ ಕಂಪನಿಗಳು ದಾಖಲೆಗಳ ನಕಲಿ / ಮಾರ್ಫಡ್ / ತಿದ್ದುಪಡಿ ಮಾಡಿದ ಪ್ರತಿಗಳನ್ನು ಬಳಸಿವೆ ಮತ್ತು ನಂತರ ವಾಸ್ತವದಲ್ಲಿ ಯಾವುದೇ ಸರಕುಗಳನ್ನು ಪೂರೈಸದೇ ದೊಡ್ಡ ಪ್ರಮಾಣದ ಐಟಿಸಿಯನ್ನು ಕ್ಲೈಮ್ ಮಾಡಿವೆ ಎಂದು ಮೂಲಗಳು ತಿಳಿಸಿವೆ.
"ವಲಯ ಘಟಕದ ತನಿಖಾಧಿಕಾರಿಗಳು ಸಿಡಿಆರ್ಗಳು, ಸಿಎಎಫ್ಗಳು ಮತ್ತು ರಿಟರ್ನ್ಸ್ ಸಲ್ಲಿಸುವ ಮಾದರಿಗಳನ್ನು ತನಿಖೆ ಮಾಡಿದ್ದಾರೆ. ದೇಶದ ವಿವಿಧ ನಗರಗಳು / ರಾಜ್ಯಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ಈ ಸಿಂಡಿಕೇಟ್, ನಕಲಿ ಕಾನೂನು ದಾಖಲೆಗಳನ್ನು ಬಳಸಿಕೊಂಡು ನಕಲಿ ಸಂಸ್ಥೆಗಳನ್ನು ಹುಟ್ಟು ಹಾಕುತ್ತಿದೆ ಮತ್ತು ಬಯೋಮೆಟ್ರಿಕ್ ದೃಢೀಕರಣ ತಪ್ಪಿಸಿ ಸಿಮ್ ಕಾರ್ಡ್ಗಳನ್ನು ಪಡೆಯಲು ಸಫಲವಾಗಿದೆ" ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.