ನವದೆಹಲಿ:ದೆಹಲಿ ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನ ರಾಜಕೀಯ ಅಖಾಡದಲ್ಲಿ ಅಭ್ಯರ್ಥಿಗಳ ವಾಗ್ಝರಿ ಬಿರುಸಾಗಿದೆ. ಒಬ್ಬರ ಮೇಲೊಬ್ಬರು ಟೀಕೆ ಟಿಪ್ಪಣಿ ನಡೆಸುತ್ತಿದ್ದಾರೆ. ಇದು ಕೆಲವೊಂದು ವಿವಾದಗಳನ್ನೂ ಸೃಷ್ಟಿಸಿದೆ. ಸಂಸದೆ ಪ್ರಿಯಾಂಕಾ ವಾದ್ರಾ ವಿರುದ್ಧ ಬಿಜೆಪಿ ಅಭ್ಯರ್ಥಿ ನೀಡಿದ ಹೇಳಿಕೆಯು ಆಕ್ಷೇಪಕ್ಕೆ ಕಾರಣವಾಗಿದೆ.
ಬಿಜೆಪಿಯ ಹಿರಿಯ ನಾಯಕ ಮತ್ತು ಕಲ್ಕಾಜಿ ಕ್ಷೇತ್ರದ ಅಭ್ಯರ್ಥಿ ರಮೇಶ್ ಬಿಧುರಿ ಅವರು, ಪ್ರಿಯಾಂಕಾ ವಾದ್ರಾ ಅವರ ಕೆನ್ನೆಯಂಥಹ ರಸ್ತೆಗಳನ್ನು ನಿರ್ಮಿಸುವುದಾಗಿ ಹೇಳಿದ್ದಾರೆ. ಇದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನು ಟೀಕಿಸಿರುವ ಕಾಂಗ್ರೆಸ್, ಭಾರತೀಯ ಜನತಾ ಪಕ್ಷವು ಮಹಿಳಾ ವಿರೋಧಿಯಾಗಿದೆ ಎಂದು ಕಿಡಿಕಾರಿದೆ.
ಬಿಜೆಪಿ ಅಭ್ಯರ್ಥಿ ಹೇಳಿದ್ದೇನು?ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ನಡೆಸುತ್ತಿರುವ ವೇಳೆ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಅವರು, ತಮ್ಮ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ, ರಸ್ತೆ ನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ತಾವು ಕಲ್ಕಾಜಿಯಲ್ಲಿ ಪ್ರಿಯಾಂಕಾ ವಾದ್ರಾ ಅವರ ಕೆನ್ನೆಯಂಥಹ ರಸ್ತೆಗಳನ್ನು ನಿರ್ಮಾಣ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಹಿಂದೆ ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಅವರು ಬಿಜೆಪಿ ಸಂಸದೆ ಹೇಮಾಮಾಲಿನಿ ಅವರ ಕೆನ್ನೆಯಂಥ ರಸ್ತೆ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದರು. ಅವರಿಂದ ಅದು ಸಾಧ್ಯವಾಗಲಿಲ್ಲ. ಆದರೆ, ನಾನು ಪ್ರಿಯಾಂಕಾ ಗಾಂಧಿ ಕೆನ್ನೆಯಂಥಹ ರಸ್ತೆಗಳನ್ನು ನಿರ್ಮಾಣ ಮಾಡಿಕೊಡುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.