ಲಖಿಸರಾಯ್, ಬಿಹಾರ:ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಜಿಲ್ಲೆಯ ರಾಮ್‌ಗಢ ಪೊಲೀಸ್ ಠಾಣೆ ಚೌಕ್ ವ್ಯಾಪ್ತಿಯ ಝಲೌನಾ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-30ರಲ್ಲಿ ಈ ಅಪಘಾತ ಸಂಭವಿಸಿದೆ. ಟ್ರಕ್ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ 9 ಜನರು ಸಾವನ್ನಪ್ಪಿದ್ದು, ಸುಮಾರು 18ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಲಖಿಸರಾಯ್‌ನಲ್ಲಿ ರಸ್ತೆ ಅಪಘಾತ: ಮಾಹಿತಿ ಪ್ರಕಾರ ಡಿಕ್ಕಿಯ ರಭಸಕ್ಕೆ ಆಟೋ ಹಲವು ಮೀಟರ್ಗಳ ದೂರದಷ್ಟು ಹಾರಿ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಆ ಆಟೋದಲ್ಲಿ 14 ಮಂದಿ ಪ್ರಯಾಣಿಸುತ್ತಿದ್ದು, ಇದರಲ್ಲಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಈ ವೇಳೆ, ಓರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, 18 ಜನ ಗಾಯಗೊಂಡಿದ್ದಾರೆ. 18 ಜನರ ಪೈಕಿ 5 ಜನರ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆ ಅವರನ್ನು ಉತ್ತಮ ಚಿಕಿತ್ಸೆಗಾಗಿ ಲಖಿಸರಾಯಿಯಿಂದ ಪಿಎಂಸಿಎಚ್‌ಗೆ ಕಳುಹಿಸಲಾಯಿತು.
ಮೃತರ ಗುರುತು ಪತ್ತೆಗೆ ನಿರತ ಪೊಲೀಸರು:ಮೃತರಲ್ಲಿ ಒಬ್ಬರನ್ನು ಆಟೋ ಚಾಲಕ ಮನೋಜ್ ಕುಮಾರ್ ಎಂದು ಗುರುತಿಸಲಾಗಿದ್ದು, 8 ಜನರು ಮುಂಗೇರ್ ಮತ್ತು ಲಖಿಸರಾಯ್ ನಿವಾಸಿಗಳು ಎಂದು ಹೇಳಲಾಗಿದೆ. ಸದ್ಯ ಜಿಲ್ಲಾ ಎಸ್ಪಿ ಪಂಕಜ್ ಕುಮಾರ್ ಮತ್ತು ನಗರಸಭಾ ಠಾಣಾ ಅಧ್ಯಕ್ಷ ದಲ್ಬಾಲ್ ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಮೃತರನ್ನು ಗುರುತಿಸುವ ಕಾರ್ಯ ಆರಂಭಿಸಿದ್ದಾರೆ. ಘಟನೆಯ ನಂತರ ಎಲ್ಲರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗುತ್ತಿದೆ.