ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವುದು ಕಾಂಗ್ರೆಸ್ ಮತ್ತು ಇಂಡಿಯಾ ಕೂಟದ ಆದ್ಯತೆಯಾಗಿದೆ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.
ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರಕ್ಕೆ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಶ್ರೀನಗರಕ್ಕೆ ಅವರು ಭೇಟಿ ನೀಡಿದರು. ಬೆಳಗ್ಗೆ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಜಮ್ಮು-ಕಾಶ್ಮೀರ ಮತ್ತು ಲಡಾಖ್ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮರಳಿ ನೀಡುವುದು ನಮ್ಮ ಗುರಿ. ಕಣಿವೆಯಲ್ಲಿ ಆದಷ್ಟು ಬೇಗ ರಾಜ್ಯತ್ವವನ್ನು ಮರುಸ್ಥಾಪಿಸಲಾಗುವುದು. ಚುನಾವಣೆ ಘೋಷಣೆಗೂ ಮುನ್ನ ರಾಜ್ಯತ್ವ ಮರುಸ್ಥಾಪನೆ ಮಾಡಬಹುದೆಂದು ನಾವೆಲ್ಲರೂ ನಿರೀಕ್ಷಿಸಿದ್ದೆವು. ಆದರೆ, ಅದು ಆಗಲಿಲ್ಲ. ಚುನಾವಣಾ ಆಯೋಗ ಈಗಾಗಲೇ ಚುನಾವಣೆ ಘೋಷಣೆ ಮಾಡುವ ಮೂಲಕ ಒಂದು ಹೆಜ್ಜೆ ಮುಂದೆ ಹೋಗಿದೆ ಎಂದರು.
ಸ್ವಾತಂತ್ರ್ಯದ ನಂತರ ಒಂದು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಡೌನ್‌ಗ್ರೇಡ್ ಮಾಡಿರುವುದು ಇದೇ ಮೊದಲು. ಈ ರೀತಿ ಹಿಂದೆಂದೂ ಆಗಿರಲಿಲ್ಲ. ಕೇಂದ್ರಾಡಳಿತ ಪ್ರದೇಶಗಳು ರಾಜ್ಯಗಳಾಗಿ ಮಾರ್ಪಟ್ಟ ಉದಾಹರಣೆ ಇದೆ. ಆದರೆ, ರಾಜ್ಯವು ಕೇಂದ್ರಾಡಳಿತ ಪ್ರದೇಶವಾಗಿರುವುದು ಇದು ಮೊದಲ ಬಾರಿಗೆ. ನಮ್ಮ ಚುನಾವಣಾ ಪ್ರಾಣಾಳಿಕೆಯಲ್ಲಿ ರಾಜ್ಯ ಸ್ಥಾನಮಾನ ಬಗ್ಗೆ ಉಲ್ಲೇಖಿಸಲಾಗಿದ್ದು, ಇದನ್ನು ಪುನಃ ಜಾರಿಗೆ ತರುವುದರ ಜೊತೆಗೆ ತಮ್ಮ ಹಕ್ಕುಗಳನ್ನು ಮರಳಿ ನೀಡುತ್ತೇವೆ ಎಂದು ರಾಹುಲ್ ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಧಾನಸಭೆ ಚುನಾವಣೆಗೆ ಸಂಬಂಧಪಟ್ಟಂತೆ ತಳಮಟ್ಟದ ಸಿದ್ಧತೆಗಳ ಕುರಿತು ಮಾಹಿತಿ ಪಡೆದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1ರಂದು ಮೂರು ಹಂತಗಳಲ್ಲಿ ನಡೆಯಲಿದೆ. ಅಕ್ಟೋಬರ್ 4ರಂದು ಮತಗಳ ಎಣಿಕೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಈಗಾಗಲೇ ತಿಳಿಸಿದೆ.
ಇದನ್ನೂ ಓದಿ: ತಮಿಳಗ ವೆಟ್ರಿ ಕಳಗಂ ಪಕ್ಷದ ಧ್ವಜ ಮತ್ತು ಗೀತೆ ಅನಾವರಣಗೊಳಿಸಿದ ನಟ ವಿಜಯ್ - Vijay unveiled party flag anthem