ಕರ್ನಾಟಕ

karnataka

ETV Bharat / bharat

ಚೆನ್ನೈನಲ್ಲಿ ಕಂಗೊಳಿಸುತ್ತಿರುವ ಅಯೋಧ್ಯೆ ಶ್ರೀರಾಮನ ಮಾದರಿ ಗಣಪ!: 500 ಕೆಜಿ ತೂಕದ ಲಾಡು ತಯಾರಿ - Ram Mandir Replica Ganesh - RAM MANDIR REPLICA GANESH

ತಮಿಳುನಾಡಿನ ಭಕ್ತರು ಗಣೇಶ ಚತುರ್ಥಿಯನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದಾರೆ. ಚೆನ್ನೈನಲ್ಲಿ ಅಯೋಧ್ಯೆ ಶ್ರೀರಾಮನ ಮಾದರಿ ಗಣಪನನ್ನು ಕುಳ್ಳಿರಿಸಲಾಗಿದೆ.

ಅಯೋಧ್ಯೆ ಶ್ರೀರಾಮನ ಮಾದರಿ ಚೆನ್ನೈನಲ್ಲಿ ಕಂಗೊಳಿಸುತ್ತಿರುವ ಗಣಪ
ಅಯೋಧ್ಯೆ ಶ್ರೀರಾಮನ ಮಾದರಿ ಚೆನ್ನೈನಲ್ಲಿ ಕಂಗೊಳಿಸುತ್ತಿರುವ ಗಣಪ (ANI)

By ANI

Published : Sep 7, 2024, 5:55 PM IST

Updated : Sep 7, 2024, 6:10 PM IST

ತಮಿಳುನಾಡು/ಪಶ್ಚಿಮಬಂಗಾಳ:ಇಂದು ಗಣೇಶ ಚತುರ್ಥಿ. ದೇಶದ ವಿವಿಧೆಡೆ ಗಜಮುಖನನ್ನು ಪ್ರತಿಷ್ಠಾಪಿಸಿ ಭಕ್ತರು ಪೂಜಾ ಕೈಂಕರ್ಯ ನಡೆಸುತ್ತಿದ್ದಾರೆ. ವಿಶೇಷವೆಂದರೆ, ಅಯೋಧ್ಯೆ ರಾಮಮಂದಿರದಲ್ಲಿ ವಿರಾಜಮಾನವಾಗಿರುವ ಶ್ರೀರಾಮ ವಿಗ್ರಹದ ಮಾದರಿಯಲ್ಲಿ ತಮಿಳುನಾಡಿನ ಭಕ್ತರು ವಿಘ್ನ ವಿನಾಶಕನನ್ನು ಪ್ರತಿಷ್ಠಾಪಿಸಿದ್ದಾರೆ.

ತಮಿಳುನಾಡು ಬಿಜೆಪಿ ಪದಾಧಿಕಾರಿಗಳು ಮತ್ತು ಸದಸ್ಯರು 'ರಾಮಗಣಪ'ನ ವಿನ್ಯಾಸವನ್ನು ಮಾಡಿಸಿದ್ದಾರೆ. ಉತ್ತರಪ್ರದೇಶದ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಸರ್ವಸಂಪನ್ನನಾಗಿ ನಿಂತಿರುವ ರಾಮನಂತೆಯೇ, ಚೆನ್ನೈನಲ್ಲಿ ಗಣಪನು ಕಂಗೊಳಿಸುತ್ತಿದ್ದಾನೆ. ರಾಮನ ಮೂರ್ತಿಗೆ ಕಪ್ಪುಶಿಲೆಯನ್ನು ಬಳಸಲಾಗಿತ್ತು. ಸುತ್ತಲೂ ಹಲವು ದೇವತೆಗಳ ಚಿತ್ರವನ್ನು ಬಿಡಿಸಲಾಗಿದೆ. ಇದೇ ಮಾದರಿಯಲ್ಲಿ ಗಣಪನ ಸುತ್ತಲೂ ದೇವಾನುದೇವತೆಗಳ ಚಿತ್ರ ರೂಪಿಸಲಾಗಿದೆ.

ಚೆನ್ನೈನಲ್ಲಿ ನಿಂತಿರುವ ಅಯೋಧ್ಯೆ ರಾಮನ ಮಾದರಿ ಗಣಪ (ANI)

ನಿಂತ ಭಂಗಿಯಲ್ಲಿರುವ ಗಣಪನು ತನ್ನ ಕೈಯಲ್ಲಿ ರಾಮನಂತೆಯೇ ಬಿಲ್ಲನ್ನು ಹೊಂದಿದ್ದಾನೆ. ಸರ್ವಾಲಂಕೃತ ರಾಮನಂತೆಯೇ ಸಂಕಷ್ಟ ಹರನಿಗೂ ಅಲಂಕಾರ ಮಾಡಲಾಗಿದೆ. ಥೇಟ್​ ಮೂಲ ರಾಮನಂತೆ ಕಾಣುವ ಈ ವಿಗ್ರಹ ಎಲ್ಲರ ಗಮನ ಸೆಳೆದಿದೆ. ಈ ಕಲಾತ್ಮಕ ರಚನೆಯು ಚೆನ್ನೈನಲ್ಲಿ ಗಣೇಶ ಚತುರ್ಥಿ ಆಚರಣೆಗಳಿಗೆ ವಿಶಿಷ್ಟ ಸ್ಪರ್ಶ ನೀಡಿದೆ.

ವಿಶೇಷ ವಸ್ತುಗಳಿಂದ ರೂಪಿಸಲಾದ 40 ಅಡಿ ಗಣಪ (ANI)

ವಿಶೇಷ ವಸ್ತುಗಳಿಂದ 40 ಅಡಿ ಗಣಪ:ಇನ್ನೊಂದೆಡೆ, 40 ಅಡಿ ಎತ್ತರದ ಗಣೇಶ ವಿಗ್ರಹವನ್ನು 6 ಸಾವಿರ ಹಿತ್ತಾಳೆಯ ತಾಂಬೂಲ ತಟ್ಟೆಗಳು, 1,500 ಕಾಮಾಕ್ಷಿ ದೀಪಗಳು ಮತ್ತು 350 ಶಂಖಗಳನ್ನು ಬಳಸಿ ರೂಪಿಸಲಾಗಿದೆ. ಇದು ಕಲಾತ್ಮಕತೆ ಮತ್ತು ಭಕ್ತಿಯ ಗಮನಾರ್ಹ ಮಿಶ್ರಣವಾಗಿದೆ. ಎರಡು ದೊಡ್ಡ ಕೋರೆ ಹಲ್ಲುಗಳನ್ನು ಅಳವಡಿಸಲಾಗಿದೆ. ಬೃಹತ್​ ಆಕಾರದಲ್ಲಿರುವ ಗಜಮುಖ ಭಕ್ತರ ಆಕರ್ಷಣೆ ಹೆಚ್ಚಿಸಿದ್ದಾನೆ.

ಕೋಲ್ಕತ್ತಾದಲ್ಲಿ ತಯಾರಿಸಲಾಗಿರುವ 500 ಕೇಜಿ ತೂಕದ ಲಾಡು (ANI)

500 ಕೆಜಿ ತೂಕದ ಲಾಡು ತಯಾರಿ:ಕೋಲ್ಕತ್ತಾದ ಭವಾನಿಪೋರ್ ಪ್ರದೇಶದ ಸಿಹಿ ಅಂಗಡಿಯೊಂದು ಗಣೇಶ ಚತುರ್ಥಿ ಹಿನ್ನೆಲೆ 500 ಕೆಜಿ ತೂಕದ ಬೃಹತ್ ಲಡ್ಡು ಸಿದ್ಧಪಡಿಸಿದೆ. ಈ ಸಿಹಿ ಅಂಗಡಿ ಆರಂಭವಾಗಿ 140 ವರ್ಷವಾಗಿದ್ದು, ವಿಶೇಷವಾಗಿ ಈ ಲಾಡು ತಯಾರಿಸಲಾಗಿದೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಅಂಗಡಿಯ ಮಾಲೀಕ ಬಲರಾಮ್ ಮಲ್ಲಿಕ್, ಹಬ್ಬದ ಸೀಸನ್ ಗಣೇಶ ಚತುರ್ಥಿಯೊಂದಿಗೆ ಪ್ರಾರಂಭವಾಗುತ್ತದೆ. ಇದು ನಮಗೆ ಅತ್ಯಂತ ಮಂಗಳಕರ ದಿನ. ಪ್ರತಿ ವರ್ಷ ವಿಶೇಷವಾದ ಸಿಹಿ ತಯಾರು ಮಾಡುತ್ತೇವೆ. ನಮ್ಮ ಅಂಗಡಿಗೆ 140 ವರ್ಷಗಳು ಸಂದಿದ್ದು, ಈ ವರ್ಷ ಗಣೇಶನಿಗೆ ಅರ್ಪಿಸಲು 500 ಕೆಜಿಯಷ್ಟು ತೂಕದ ಲಾಡನ್ನು ಸಿದ್ಧಪಡಿಸಿದ್ದೇವೆ ಎಂದರು.

ಚತುರ್ಥಿ ಶುಭ ಕೋರಿದ ಪ್ರಧಾನಿ ಮೋದಿ:ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಗಣೇಶ ಚತುರ್ಥಿಯ ಶುಭಾಶಯಗಳನ್ನು ಕೋರಿದ್ದಾರೆ. ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಅವರು, ದೇಶದ ಜನತೆಗೆ ಗಣೇಶ ಚತುರ್ಥಿಯ ಹೃತ್ಪೂರ್ವಕ ಶುಭಾಶಯಗಳು. ಗಣಪತಿ ಬಪ್ಪಾ ಮೋರಯಾ ಎಂದು ಹೇಳಿದ್ದಾರೆ.

ಇದನ್ನೂ ಓದಿ:2.21 ಲಕ್ಷ ಹುಣಸೆ ಬೀಜಗಳಲ್ಲಿ ಅರಳಿದ ಪರಿಸರ ಸ್ನೇಹಿ ಗಣಪ; ಬೆಳಗಾವಿಯಲ್ಲೊಂದು ವಿನೂತನ ಗಜಮುಖ - Eco friendly Ganesha

Last Updated : Sep 7, 2024, 6:10 PM IST

ABOUT THE AUTHOR

...view details