ಕರ್ನಾಟಕ

karnataka

ETV Bharat / bharat

ಸಾಮಾಜಿಕ ವ್ಯವಸ್ಥೆಯಲ್ಲಿ ಬೇರೂರಿರುವ ವಿಭಜಕ ಪ್ರವೃತ್ತಿ ತಿರಸ್ಕರಿಸಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ - President Draupadi Murmu - PRESIDENT DRAUPADI MURMU

ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ರಾ​ಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ, ನಾಡಿನ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.

PRESIDENT DRAUPADI MURMU
ರಾಷ್ಟ್ರಪತಿ ದ್ರೌಪದಿ ಮುರ್ಮು (ETV Bharat)

By ETV Bharat Karnataka Team

Published : Aug 15, 2024, 8:42 AM IST

ನವದೆಹಲಿ: ಸಾಮಾಜಿಕ ವ್ಯವಸ್ಥೆಗಳಲ್ಲಿ ಬೇರೂರಿರುವ ವಿಭಜಕ ಪ್ರವೃತ್ತಿಗಳನ್ನು ತಿರಸ್ಕರಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶದ ಜನತೆಗೆ ಕರೆ ನೀಡಿದ್ದಾರೆ.

78ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ (ಆ.14) ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. ಮಾತು ಮುಂದುವರಿಸಿದ ಅವರು, "ಭಾರತದಲ್ಲಿ ರಾಜಕೀಯ ಪ್ರಜಾಪ್ರಭುತ್ವದ ಸ್ಥಿರ ಪ್ರಗತಿಯನ್ನು ಎತ್ತಿ ತೋರಿಸಿದರು. ಇದು ಸಾಮಾಜಿಕ ಪ್ರಜಾಪ್ರಭುತ್ವದತ್ತ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ" ಎಂದು ಪ್ರತಿಪಾದಿಸಿದರು.

"ರಾಷ್ಟ್ರವು ಅದರ ವೈವಿಧ್ಯತೆ ಮತ್ತು ಬಹುತ್ವದ ಮೇಲೆ ಅಭಿವೃದ್ಧಿ ಹೊಂದುತ್ತದೆ. ಒಂದು ಸುಸಂಘಟಿತ ಘಟಕವಾಗಿ ಮುಂದುವರಿಯುತ್ತದೆ. ಮೋದಿ ಸರ್ಕಾರವು ಎಸ್‌ಸಿ, ಎಸ್‌ಟಿ ಮತ್ತು ಅಂಚಿನಲ್ಲಿರುವ ವರ್ಗಗಳ ಕಲ್ಯಾಣಕ್ಕಾಗಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಸಾಮಾಜಿಕ ನ್ಯಾಯವು ಮೋದಿ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ" ಎಂದು ಹೇಳಿದರು.

"ರಾಜಕೀಯ ಪ್ರಜಾಪ್ರಭುತ್ವವು ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯಲ್ಲಿ ಇರದ ಹೊರತು ಅದು ಉಳಿಯುವುದಿಲ್ಲ" ಎಂದು ಭಾರತೀಯ ಸಂವಿಧಾನದ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಮಾತನ್ನು ಉಲ್ಲೇಖಿಸಿದ ರಾಷ್ಟ್ರಪತಿ, "ರಾಷ್ಟ್ರವು ಅದರ ವೈವಿಧ್ಯತೆ ಮತ್ತು ಬಹುತ್ವದ ಮೇಲೆ ಅಭಿವೃದ್ಧಿ ಹೊಂದುತ್ತಿದೆ. ರಾಜಕೀಯ ಪ್ರಜಾಪ್ರಭುತ್ವದ ಸ್ಥಿರವಾದ ಪ್ರಗತಿಯು ಸಾಮಾಜಿಕ ಪ್ರಜಾಪ್ರಭುತ್ವದ ಬಲವರ್ಧನೆಯತ್ತ ಸಾಧಿಸಿದ ಪ್ರಗತಿಗೆ ಸಾಕ್ಷಿಯಾಗಿದೆ" ಎಂದರು.

"ನಮ್ಮಂತಹ ವಿಶಾಲವಾದ ದೇಶದಲ್ಲಿ, ಸಾಮಾಜಿಕ ಶ್ರೇಣಿಗಳ ಆಧಾರದ ಮೇಲೆ ಅಪಶ್ರುತಿಯನ್ನು ಹುಟ್ಟುಹಾಕುವ ಪ್ರವೃತ್ತಿಯನ್ನು ತಿರಸ್ಕರಿಸಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ"ಎಂದು ಹೇಳಿದರು.

ಪ್ರಧಾನ ಮಂತ್ರಿ ಸಾಮಾಜಿಕ್ ಉತ್ಥಾನ್ ಎವಮ್ ರೋಜ್​ಗಾರ್ ಅಧಾರಿತ್ ಜನಕಲ್ಯಾಣ್​ (PM-SURAJ), ನೇರ ಆರ್ಥಿಕ ನೆರವು ಒದಗಿಸುವ ಮತ್ತು ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (PM-JANMAN) ಸೇರಿದಂತೆ ಅಂಚಿನಲ್ಲಿರುವ ಗುಂಪುಗಳನ್ನು ಮೇಲಕ್ಕೆತ್ತುವ ಗುರಿಯನ್ನು ಹೊಂದಿರುವ ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳ (PVTGs) ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುವುದು ಸೇರಿದಂತೆ ಹಲವಾರು ಸರ್ಕಾರಿ ಉಪಕ್ರಮಗಳನ್ನು ಮುರ್ಮು ವಿವರಿಸಿದರು.

ರೈತರನ್ನು "ಅನ್ನದಾತ" (ಆಹಾರ ಒದಗಿಸುವವರು) ಎಂದು ಗುರುತಿಸಿದ ರಾಷ್ಟ್ರಪತಿ, ಭಾರತದ ಕೃಷಿ ಸ್ವಾವಲಂಬನೆಗೆ ಅವರ ಕೊಡುಗೆಗಳನ್ನು ಶ್ಲಾಘಿಸಿದರು. "ರೈತರು ಭಾರತವನ್ನು ಕೃಷಿಯಲ್ಲಿ ಸ್ವಾವಲಂಬಿಯಾಗಿಸಲು ಮತ್ತು ನಮ್ಮ ಜನರಿಗೆ ಆಹಾರ ನೀಡಲು ಅಪಾರ ಕೊಡುಗೆ ನೀಡಿದ್ದಾರೆ" ಎಂದರು. ರಸ್ತೆಗಳು, ರೈಲ್ವೆಗಳು ಮತ್ತು ಬಂದರುಗಳು ಸೇರಿದಂತೆ ಮೂಲಸೌಕರ್ಯಗಳಲ್ಲಿ ಗಣನೀಯ ಸುಧಾರಣೆಗಳ ಬಗ್ಗೆ ಮುರ್ಮು ಬೆಳಕು ಚೆಲ್ಲಿದರು.

ಆಗಸ್ಟ್ 14, ನಮ್ಮ ದೇಶ 'ವಿಭಜನೆಯ ಭಯಾನಕ ಸ್ಮರಣೆಯ ದಿನ'ವಾಗಿ ಆಚರಿಸುತ್ತಿದೆ. ವಿಭಜನೆಯ ಭೀಕರತೆಯನ್ನು ನೆನಪಿಸಿಕೊಳ್ಳುವ ದಿನವಿದು. ನಮ್ಮ ಮಹಾನ್ ದೇಶ ಒತ್ತಾಯಪೂರ್ವಕವಾಗಿ ವಿಭಜನೆಯಾದಾಗ, ಲಕ್ಷಾಂತರ ಜನರು ಪಲಾಯನ ಮಾಡಬೇಕಾಗಿ ಬಂತು. ಲೆಕ್ಕವಿಲ್ಲದಷ್ಟು ಜನರು ಜೀವ ಕಳೆದುಕೊಂಡರು. ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು, ನಾವು ಈ ಅಭೂತಪೂರ್ವ ಮಾನವೀಯ ದುರಂತವನ್ನು ನೆನಪಿಸಿಕೊಳ್ಳುತ್ತೇವೆ ಮತ್ತು ಛಿದ್ರಗೊಂಡ ಆ ಕುಟುಂಬಗಳ ಬೆಂಬಲಕ್ಕೆ ನಾವು ನಿಂತಿದ್ದೇವೆ, ಹಾಗೂ ಮುಂದೆಯೂ ನಿಲ್ಲುತ್ತೇವೆ" ಎಂದು ಭರವಸೆ ನೀಡಿದರು.

ಇದನ್ನೂ ಓದಿ:ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬೆಳಗಾವಿಯ ಒಂದೇ ಮನೆಯ ಮಹಿಳೆಯರು ಸೇರಿ 13 ಜನ ಜೈಲಿಗೆ: ಇದು ದೇಶಭಕ್ತರ ಕುಟುಂಬ - Freedom Fighter interview

ABOUT THE AUTHOR

...view details