ಲಖನೌ (ಉತ್ತರಪ್ರದೇಶ):ಲೋಕಸಭೆ ಚುನಾವಣೆ ಹೊತ್ತಲ್ಲೇ, ಉತ್ತರಪ್ರದೇಶದ ಲಖನೌನ ಕಾಕೋರಿ ಎಂಬಲ್ಲಿ ಬಿಜೆಪಿ ಮುಖಂಡನ ಮೇಲೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಬಿಜೆಪಿ ಮುಖಂಡ ತೀವ್ರ ಗಾಯಗೊಂಡಿದ್ದರೆ, ಆತನ ಸಹಚರ ಹತ್ಯೆಗೀಡಾಗಿದ್ದಾರೆ. ದಾಳಿಕೋರರ ಪತ್ತೆಗೆ ಪೊಲೀಸರು 5 ತಂಡಗಳನ್ನು ರಚಿಸಿದ್ದಾರೆ.
ಬಿಜೆಪಿ ಮುಖಂಡ, ಕಾಕೋರಿ ಬ್ಲಾಕ್ ಮಾಜಿ ಮುಖ್ಯಸ್ಥ ರಾಮ್ ಬಿಲಾಸ್ ರಾವತ್ ಅವರು ತೇಜ್ ಕಿಶಾನಖೇಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ವಾಪಸ್ ತೆರಳುತ್ತಿದ್ದರು. ಈ ವೇಳೆ ಬೆನ್ನಟ್ಟಿ ಬಂದ ದಾಳಿಕೋರರ ಗುಂಪು ಅವರ ಮೇಲೆ ಗುಂಡಿನ ದಾಳಿ ಮಾಡಿದೆ. ರಾಮ್ ಬಿಲಾಸ್ ಅವರ ಜೊತೆಗೆ ಇದ್ದ ಅನಂತ್ ರಾಮ್ ಯಾದವ್ (65) ಗುಂಡೇಟಿಗೆ ಬಲಿಯಾಗಿದ್ದಾರೆ. ಜೈಕರನ್ ಯಾದವ್ ಮತ್ತು ಅಮಿತ್ ಅಲಿಯಾಸ್ ಛೋಟು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯು ಶುಕ್ರವಾರ ರಾತ್ರಿ 10 ಗಂಟೆ ವೇಳೆಗೆ ನಡೆದಿದೆ. ರಾಮ್ ಬಿಲಾಸ್ ಅವರ ಹೊಟ್ಟೆಗೆ ಗುಂಡು ತಗುಲಿದ್ದರೆ, ಅನಂತ್ ರಾಮ್ ಯಾದವ್ ಕುತ್ತಿಗೆಗೆ ಹಾಗೂ ಜೈಕರಣ್ ಅವರ ತಲೆಗೆ ಗುಂಡುಗಳು ತಾಕಿವೆ. ಅಮಿತ್ ಕೈಗೆ ಪೆಟ್ಟಾಗಿದೆ. ಅನಂತ್ ರಾಮ್ ಯಾದವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ ರಾಮ್ ಬಿಲಾಸ್ ಅವರನ್ನು ಅಪೋಲೋ ಮೆಡಿಕಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದ ನಂತರ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ, ಬಳಿಕ ಗಾಯಾಳುಗಳನ್ನು ಭೇಟಿ ಮಾಡಿ ವಿಚಾರಿಸಿದ್ದಾರೆ.